ವಿವಿಧ ಬೇಡಿಕೆ ಈಡೇರಿಕೆಗೆ ದಸಂಸ ಆಗ್ರಹ

ವಿವಿಧ ಬೇಡಿಕೆ ಈಡೇರಿಕೆಗೆ ದಸಂಸ ಆಗ್ರಹ
Published on

ಹುಣಸೂರು: ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಸಾರ್ವಜನಿಕ ಆಸ್ಪತ್ರೆ ಮತ್ತು ಅರಸು ಕಲಾಭವನ ಕಟ್ಟಡ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಸಮರ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ(ಸಂಯೋಜಕ)ಯ ಹುಣಸೂರು ಘಟಕದ ಸದಸ್ಯರು ಸಂವಿಧಾನ ವೃತ್ತದಿಂದ ತಾಲೂಕು ಕಚೇರಿವರಗೆ ಕಾಲ್ನಡಿಗೆ ಜಾಥಾ ನಡೆಸಿದರು.

ಶುಕ್ರವಾರ ಸಂವಿಧಾನ ವೃತ್ತದಿಂದ ಜಾಥಾ ನಡೆಸಿದ ದಸಂಸ ಸದಸ್ಯರು ತಾಲೂಕು ಆಡಳಿತದ ನಿಷ್ಕ್ರಿಯತೆ ಬಿಡಲಿ, ಬಡವರ ಪರ ದುಡಿಯಲಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗುತ್ತಾ ಸಾಗಿದರು.

ತಾಲೂಕು ಕಚೇರಿ ಆವರಣದಲ್ಲಿ ಜಮಾವಣೆಗೊಂಡ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ದಸಂಸ ಜಿಲ್ಲಾ ಕಾರ್ಯದರ್ಶಿ ಡೇವಿಡ್ ರತ್ನಪುರಿ, ತಾಲೂಕಿನಲ್ಲಿ ನೂರಾರು ಸಮಸ್ಯೆಗಳು ಕಾಡುತ್ತಿದ್ದು, ಜನರು ನಿತ್ಯ ಸರ್ಕಾರಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಸಮಸ್ಯೆಗಳು ಮಾತ್ರ ಪರಿಹಾರವಾಗುತ್ತಿಲ್ಲ. ಸರ್ವೇ ನಂ.90(ಮುತ್ತುರಾಯನಹೊಸಳ್ಳಿ ಕಾವಲ್)ನಲ್ಲಿ 1650 ಎಕರೆ ದರಖಾಸ್ತು ಭೂಮಿ ಇದ್ದು, ಸರ್ಕಾರ ಕೂಡಲೇ ಸರ್ವೇ ಮಾಡಿಸಿ ಹದ್ದುಬಸ್ತು ಮಾಡಬೇಕು. ಕಳೆದ 4-5 ವರ್ಷಗಳ ಹಿಂದೆ ನಗರದ ಬೈಪಾಸ್ ರಸ್ತೆಯಲ್ಲಿ ಆರಂಭಗೊಂಡ ಹೈಟೆಕ್ ಸಾರ್ವಜನಿಕ ಆಸ್ಪತ್ರೆ ಮತ್ತು ಅರಸು ಕಲಾಭವನ ಕಾಮಗಾರಿ ಇಂದಿಗೂ ಪೂರ್ಣಗೊಂಡಿಲ್ಲ. ಕೋಟ್ಯಂತರ ರೂ.ಗಳ ಸಾರ್ವಜನಿಕರ ಹಣ ಪೋಲಾಗುತ್ತಿದ್ದು, ಕಟ್ಟಡಗಳು ಪ್ರಯೋಜನಕ್ಕೆ ಬಾರದೆ ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿವರ್ತಿತವಾಗುವ ಕಾಲ ದೂರವಿಲ್ಲ. ತಾಲೂಕಿನಾದ್ಯಂತ ಕೆರೆಕಟ್ಟೆಗಳ ಒತ್ತುವರಿ ನಡೆದಿದ್ದು, ತಾಲೂಕು ಆಡಳಿತ ಮೌನವಹಿಸಿದೆ. 30ಕ್ಕೂ ಹೆಚ್ಚು ಹಾಡಿಗಳಲ್ಲಿ ಮೂಲಸೌಕರ್ಯ ಕೊರತೆಯಿದ್ದು, ಗಿರಿಜನರ ಬಾಳಿಗೆ ಶಾಪವಾಗಿದೆ. ತಾಲೂಕು ಆಡಳಿತ ಕೂಡಲೇ ಈ ಎಲ್ಲ ಸಮಸ್ಯೆಗಳ ಕುರಿತು ಕಾಲಮಿತಿಯಲ್ಲಿ ಕ್ರಮವಹಿಸಿ ಪರಿಹರಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಜಿಲ್ಲಾಧ್ಯಕ್ಷ ಪ್ರಕಾಶ್, ತಾಲೂಕು ಅಧ್ಯಕ್ಷ ವೇಣುಕುಮಾರ್, ಬಸವಣ್ಣಮ, ಸುನೀತಾ ಪ್ರಕಾಶ್‌ಗೌಡ, ಮಹದೇವಮ್ಮ ಕಟ್ಟೆಮಳಲವಾಡಿ, ಗೋವಿಂದ ಎಚ್.ಡಿ.ಕೋಟೆ, ಪ್ರಸನ್ನ, ತಳ್ಳೂರುಮಂಜು, ದೇವರಾಜು, ದರ್ಶನ್, ಡಿ.ಮಹೇಶ್, ಗೌತಮ್ ಚಿಲ್ಕುಂದ ಇತರರಿದ್ದರು. ಗ್ರೇಡ್ 2 ತಹಸೀಲ್ದಾರ್ ನರಸಿಂಹಯ್ಯರಿಗೆ ಮನವಿ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net