ದರ್ಶನ್ ಪ್ರಕರಣ, ಯಾರೂ ನನ್ನ ಬಳಿ ಬಂದಿಲ್ಲ

ggp1
Published on

ಬೆಂಗಳೂರು: ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರು ನನ್ನ ಬಳಿ ಬಂದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಸ್ಪಷ್ಟಪಡಿಸಿದರು.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಪಕ್ಷದ ಆಧಾರದ ಮೇಲೆ ನಡೆಯುತ್ತಿಲ್ಲ. ಪ್ರಕರಣದ ತಪ್ಪಿತಸ್ಥರು ಯಾವುದೇ ಪಕ್ಷದಲ್ಲಿದ್ದರು ತಪ್ಪಿತಸ್ಥರೇ ಆಗಿರುತ್ತಾರೆ. ಬೇರೆ ಪಕ್ಷದಲ್ಲಿದ್ದಾರೆ ಎಂಬುದನ್ನು ಮುಖ್ಯವಾಗಿ ತೆಗೆದುಕೊಳ್ಳುವುದಿಲ್ಲ. ಏನು ತಪ್ಪು ಮಾಡಿದ್ದಾರೆ ಎಂಬ ಆಧಾರದ ಮೇಲೆ ತನಿಖೆ, ವಿಚಾರಣೆ ನಡೆಯುತ್ತದೆ ಎಂದು ಹೇಳಿದರು.

ನಟ ದರ್ಶನ್ ವಿಚಾರದಲ್ಲಿ ಯಾರು ನನ್ನ ಬಳಿ ಬರಬೇಡಿ ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂಬುದರ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಮ್ಮ ಅಧಿಕಾರಿಗಳು ಮಾಹಿತಿ ನೀಡಲು ಹೋಗುವುದನ್ನು ಹೊರತುಪಡಿಸಿ, ಯಾರು ಹೋಗುವುದಿಲ್ಲ. ಅದರ ಅವಶ್ಯಕತೆಯು ಯಾರಿಗೂ ಇಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಯಾರು ನನ್ನ ಬಳಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಪೊಲೀಸರ ನಡುವೆ ತುಸು ಗೊಂದಲ

ರಾಹುಲ್ ಗಾಂಧಿ ಅವರ ವಿರುದ್ಧ ಎಕ್ಸ್ ಖಾತೆಯಲ್ಲಿ ವಿವಾದಾತ್ಮಕ ಪೋಸ್ಟ್ ಮಾಡಿದ್ದ ವ್ಯಕ್ತಿಗೆ ನೋಟಿಸ್ ನೀಡಲು ತೆರಳಿದ್ದ ಹೈಗ್ರೌಂಡ್ ಠಾಣೆ ಪೊಲೀಸರಿಗೆ ಅಡ್ಡಿಪಡಿಸಿದ ವಿಚಾರದ ಕುರಿತು ಪ್ರತಿಕ್ರಿಯಿಸಿ, ಉತ್ತರ ಪ್ರದೇಶದ ನೋಯ್ಡಗೆ ಮಫ್ತಿಯಲ್ಲಿ ಹೋಗಿದ್ದರು. ಅಲ್ಲಿನ ಪೊಲೀಸರಿಗೆ ಮುಂಚಿತವಾಗಿ ತಿಳಿಸಬೇಕಿತ್ತು. ಅಲ್ಲಿಗೆ ಹೋದ ನಂತರ ತಿಳಿಸಿದ್ದಾರೆ. ಅಲ್ಲಿನ ಪೊಲೀಸರ ಸಹಾಯ ಪಡೆದು ನೋಟಿಸ್ ನೀಡಿದ್ದಾರೆ. ವಿಚಾರಣೆಗೆ ಹಾಜರಾಗದೇ ಇದ್ದರೆ, ವಾರಂಟ್ ಜಾರಿ ಮಾಡಿ ಬಂಧಿಸುತ್ತಾರೆ ಎಂದು ಡಾ.ಪರಮೇಶ್ವರ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net