ಇಲ್ಲದ ಖಾತೆಗೆ ಸಚಿವರಾಗಿದ್ದ ದರ್ಶನಾಪುರ!

Sharanabasappa Darshanapur
Published on

ಬೆಂಗಳೂರು:

ಅಂತೂ ಸಾರ್ವಜನಿಕ ಉದ್ದಿಮೆಗಳ ಇಲಾಖೆಯಿಂದ ಸಚಿವ ಶರಣ ಬಸಪ್ಪ ದರ್ಶನಾಪುರ ಅವರು ಮುಕ್ತಿ ಪಡೆದಿದ್ದಾರೆ.

ತಮ್ಮ ಬಳಿ ಇಲ್ಲದ ಖಾತೆಗೆ ದರ್ಶನಾಪುರ ಅವರು ಸಚಿವರಾಗಿದ್ದು ಅಚ್ಚರಿ. ಈ ಇಲಾಖೆಯ ಸಭೆ ನಡೆಸಲು ಮುಂದಾದ ಸಂದರ್ಭದಲ್ಲಿ ಸಾರ್ವಜನಿಕ ಉದ್ದಿಮೆಗಳ ಇಲಾಖೆ ಹಣಕಾಸು ಇಲಾಖೆ ಜೊತೆಗೆ ವಿಲೀನವಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ. ಸದ್ಯ ಹಣಕಾಸು ಇಲಾಖೆ ಮುಖ್ಯಮಂತ್ರಿಗಳ ಬಳಿಯೇ ಇರುವುದರಿಂದ ಅವರೇ ಸಾರ್ವಜನಿಕ ಉದ್ದಿಮೆಗಳ ಇಲಾಖೆ ಜವಬ್ದಾರಿ ಹೊರಲಿದ್ದಾರೆ.

ಆಗಿದ್ದು ಏನು?

ಸಿದ್ದರಾಮಯ್ಯ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿರುವ ದರ್ಶನಾಪುರ ಅವರಿಗೆ ಸಣ್ಣ ಕೈಗಾರಿಕೆ ಜೊತೆಗೆ ಹೆಚ್ಚುವರಿಯಾಗಿ ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ಜವಬ್ದಾರಿಯನ್ನು ನೀಡಲಾಗಿತ್ತು. ರಾಜ್ಯಪಾಲರು ಇದಕ್ಕೆ ಅಂಕಿತ ಹಾಕಿದ ಬಳಿಕ ಗೆಜೆಟ್‌ನಲ್ಲಿಯೂ ಪ್ರಕಟವಾಗಿತ್ತು. ಅದರಂತೆಯೇ ವಿಧಾನಸೌಧದ 3ನೇ ಮಹಡಿಯಲ್ಲಿರುವ ಕೊಠಡಿ ಬಾಗಿಲ ಬಳಿ ಹಾಕಲಾಗಿರುವ ಲಕದಲ್ಲಿಯೂ ಎರಡೂ ಖಾತೆಯನ್ನು ನಮೂದು ಮಾಡಲಾಗಿತ್ತು.

ನಾಮಲಕ ತೆಗೆಯಲು ಸೂಚನೆ

ಸರ್ಕಾರಕ್ಕೆ 100 ದಿನ ತುಂಬುವ ಸಂದರ್ಭದಲ್ಲಿ ಸಚಿವರಿಗೆ ಸಾರ್ವಜನಿಕ ಉದ್ದಿಮೆಗಳ ಇಲಾಖೆ ತಮ್ಮ ಬಳಿ ಇಲ್ಲ ಎನ್ನುವುದು ಮನವರಿಕೆಯಾಗಿದೆ. ಅದರ ಪರಿಣಾಮವಾಗಿ ತಮ್ಮ ಲೆಟರ್ ಹೆಡ್‌ನಲ್ಲಿ ಹೆಚ್ಚುವರಿ ಖಾತೆಯನ್ನು ತೆಗೆಯಲು ತಿಳಿಸಿದ್ದಾರೆ. ಅಷ್ಟೆ ಅಲ್ಲ, ತಮ್ಮ ಕಚೇರಿಯ ನಾಮಲಕದಲ್ಲಿಯೂ ಆ ಖಾತೆ ತೆಗೆದು ಸಣ್ಣ ಕೈಗಾರಿಕೆ ಮಾತ್ರ ಉಳಿಸುವಂತೆ ಖುದ್ದು ಸಚಿವ ದರ್ಶನಾಪುರ ಅವರೇ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net