ಸಹ ಕೈದಿಗಳ ಮೇಲೆ ಕೂಗಾಡಿದ ದರ್ಶನ್

Actor Darshan
Published on

ಬೆಂಗಳೂರು: ನಟ ದರ್ಶನ್‌ಗೆ ಜೈಲಿನ ನಿಯಮದ ಪ್ರಕಾರವೇ ಎಲ್ಲಾ ಸೌಲಭ್ಯ ನೀಡಲಾಗಿದೆ ಎಂದು ಕಾನೂನು ಸೇವಾ ಪ್ರಾಧಿಕಾರ ನೀಡಿರುವ ವರದಿ ವಿಷಯ ತಿಳಿದ ದರ್ಶನ್ ಶಾಕ್‌ಗೆ ಒಳಗಾಗಿದ್ದು, ಇದರಿಂದ ಕೋಪಗೊಂಡು ಸಹ ಕೈದಿಗಳ ಜತೆ ಕೂಗಾಡಿದ್ದಾರೆ ಎನ್ನಲಾಗಿದೆ.

ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿಗಳು ಶನಿವಾರ ಕೋರ್ಟ್‌ಗೆ ವರದಿ ಸಲ್ಲಿಸಿದ್ದರು. ವಾಯುವಿಹಾರ ಹೊರತು ಪಡಿಸಿ ಜೈಲಿನ ನಿಯಮದ ಪ್ರಕಾರ ದರ್ಶನ್‌ಗೆ ಎಲ್ಲಾ ಸೌಲಭ್ಯ ನೀಡಲಾಗಿದೆ ಎಂದು ಆ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ವಿಚಾರ ಜೈಲಿನ ಟಿವಿಯಲ್ಲಿ ಪ್ರಸಾರವಾಗಿತ್ತು. ಅದನ್ನು ಗಮನಿಸಿದ ಸಹ ಕೈದಿಗಳು ದರ್ಶನ್‌ಗೆ ಈ ವಿಚಾರವನ್ನು ತಿಳಿಸಿದ್ದಾರೆ. ಅದರಿಂದ ಕುಪಿತಗೊಂಡ ದರ್ಶನ್, ನನಗೆ ಏಕೆ ಈ ಶಿಕ್ಷೆ, ನಾನು ಹೀಗೆ ಜೈಲಿನಲ್ಲಿಯೇ ಸಾಯಬೇಕೆ? ಎಂದು ಕೂಗಾಡಿದ್ದಾರೆ ಎಂದು ಹೇಳಲಾಗಿದೆ. ಆಗ ಸಹಕೈದಿಯಾಗಿರುವ ಮ್ಯಾನೇಜರ್ ನಾಗರಾಜ್, ದರ್ಶನ್ ಅವರನ್ನು ಸಮಾಧಾನ ಪಡಿಸಿದ್ದಾರೆ ಎನ್ನಲಾಗಿದೆ.

ಮತ್ತೊಂದೆಡೆ ತನ್ನ ವಕೀಲರ ಜತೆ ಮಾತುಕತೆಗೆ ಕೋರಿರುವ ದರ್ಶನ್, ಬೇರೆ ಮಾರ್ಗದ ಮೂಲಕ ಹೆಚ್ಚುವರಿ ಸೌಲಭ್ಯ ಪಡೆಯಬಹುದೆ? ಎಂಬ ಬಗ್ಗೆ ಚರ್ಚಿಸಲಿದ್ದಾರೆ ಎಂದು ಹೇಳಲಾಗಿದೆ. ಈ ಮಧ್ಯೆ ದರ್ಶನ್ ಪರ ವಕೀಲರು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net