

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ದೌಲತ್ತು ನಿಂತಿಲ್ಲ. ಜೈಲಿನ ಆವರಣದಲ್ಲಿ ರೌಡಿಗಳ ಜತೆ ಕುರ್ಚಿ ಮೇಲೆ ಕುಳಿತಿರುವ ದರ್ಶನ್ ಕೈಯಲ್ಲಿ ಸಿಗರೇಟು, ಟೀ/ಕಾಫಿ ಕಪ್ ಇರುವ ಫೋಟೋ ವೈರಲ್ ಆಗಿದೆ. ಕೊಲೆ ಆರೋಪಿಯಾಗಿರುವ ದರ್ಶನ್‌ಗೆ ರಾಜಾತಿಥ್ಯ ನೀಡಲಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಜೂನ್ 9ರ ರಾತ್ರಿ ರೇಣುಕಸ್ವಾಮಿಯನ್ನು ಕೊಲೆ ಮಾಡಿದ್ದ ಆರೋಪದ ಮೇಲೆ ಜೂ.11ರಂದು ದರ್ಶನ್, ಪವಿತ್ರಾ ಗೌಡ ಸೇರಿ 17 ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದರು. ಇದಾದ ನಂತರ ಕಸ್ಟಡಿಗೆ ಪಡೆದು ಜೂ.21ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶ ಹೊರಡಿಸಿತ್ತು. ನಾಲ್ವರು ಆರೋಪಿಗಳು ತುಮಕೂರು ಜೈಲಿನಲ್ಲಿದ್ದಾರೆ. ಉಳಿದಂತೆ ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ಜೈಲಿನಲ್ಲಿ ದರ್ಶನ್, ರೌಡಿಶೀಟರ್‌ಗಳಾದ ವಿಲ್ಸನ್ ಗಾರ್ಡನ್ ನಾಗ ಹಾಗೂ ಶ್ರೀನಿವಾಸ್ ಅಲಿಯಾಸ್ ಕುಳ್ಳ ಸೀನನ ಜತೆಗೆ ಕುಳಿತು ಹರಟೆ ಹೊಡೆಯುತ್ತಿರುವ ಫೋಟೋ ವೈರಲ್ ಆಗಿದೆ. ದರ್ಶನ್ ಪಕ್ಕದಲ್ಲೇ ಆತನ ಮ್ಯಾನೇಜರ್ ನಾಗರಾಜ್ ಕೂಡ ಇದ್ದಾನೆ. ಈತ ರೇಣುಕಸ್ವಾಮಿ ಕೊಲೆ ಕೇಸ್‌ನಲ್ಲಿ 11ನೇ ಆರೋಪಿ. ದರ್ಶನ್ ಮಾಡುವ ಪಾರ್ಟಿ ಸೇರಿ ಎಲ್ಲ ಕಡೆಗಳಲ್ಲೂ ಜೊತೆಗಿರುತ್ತಿದ್ದ. ಹತ್ಯೆ ಕೇಸ್‌ನಲ್ಲಿ ನಾಗನದ್ದು ಪ್ರಮುಖ ಪಾತ್ರವಿತ್ತು ಎನ್ನಲಾಗಿದೆ. ಅಂದರೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಮತ್ತು ಆತನ ಗ್ಯಾಂಗ್‌ಗೆ ಐಷಾರಾಮಿ ಸವಲತ್ತು ಸಿಗುತ್ತಿದೆ ಎಂಬುದು ಸ್ಪಷ್ಟವಾಗಿದೆ.