

ಅಯೋಧ್ಯೆ: ಇಲ್ಲಿನ ರಾಮ ಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸುವ ಬಾಲರಾಮನ ಮೂರ್ತಿ ಯಾವುದೆಂಬುದು ಜನವರಿ 22ರಂದು ಮಂದಿರದ ಪವಿತ್ರೀಕರಣ ಕಾರ್ಯ ನಡೆಯುವ ಮಧ್ಯಾಹ್ನ 12.20ಕ್ಕಷ್ಟೇ ಗೊತ್ತಾಗಲಿದೆ ಎಂದು "ಪ್ರಾಣ ಪ್ರತಿಷ್ಠೆ' ಸಮಾರಂಭಕ್ಕೆ ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ.
ಕೆತ್ತಲಾಗಿರುವ ಮೂರು ಮೂರ್ತಿಗಳಲ್ಲಿ ಒಂದನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಈ ಮೂರೂ ವಿಗ್ರಹಗಳ ಭಾವಚಿತ್ರ ಅಥವಾ ವಿಡಿಯೋಗ್ರಹಣವನ್ನು ನಿಷೇಧಿಸಿರುವುದರಿಂದ ಆಯ್ಕೆಯಾದ ವಿಗ್ರಹದ ಅಧಿಕೃತ ಪ್ರಕಟಣೆಯಿಂದ ಹೆಚ್ಚಿನ ವ್ಯತ್ಯಾಸವೇನೂ ಆಗುವುದಿಲ್ಲ. ಮೂರ್ತಿಯನ್ನು ಕೆತ್ತಲು ಬಿಳಿ ಅಮೃತಶಿಲೆಯನ್ನು ಬಳಸಲಾಗಿದೆಯೇ ಅಥವಾ ಕಪ್ಪು ಗ್ರಾನೈಟ್ ಬಳಸಲಾಗಿದೆಯೇ ಎನ್ನುವುದಷ್ಟೇ ಅಧಿಕೃತ ಪ್ರಕಟಣೆಯಿಂದ ಗೊತ್ತಾಗುತ್ತದೆ.
ಜನವರಿ 17ರ ಪ್ರಸ್ತಾಪಿತ ನಗರ ಯಾತ್ರೆಯ ವಿವರಗಳನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಎಂದೂ ಮೂಲಗಳು ಹೇಳಿವೆ. ಜನಜಂಗುಳಿಯನ್ನು ತಡೆಯುವುದಕ್ಕಾಗಿ ಮುಂಜಾನೆಯೇ ನಗರ ಯಾತ್ರೆಯನ್ನು ನಡೆಸುವುದು ಉತ್ತಮವೆಂಬುದು ರಾಮ ಮಂದಿರ ಟ್ರಸ್ಟ್ ಸದಸ್ಯರ ಅಭಿಪ್ರಾಯವಾಗಿದೆ ಎಂದು ಮೂಲಗಳು ಹೇಳಿವೆ.