

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್ ಸೇರಿ ನಾಲ್ವರನ್ನು 2 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಕೋರ್ಟ್ ಆದೇಶಿಸಿದೆ. ಪವಿತ್ರಾ ಗೌಡ ಸೇರಿ 10 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಬುಧವಾರವೇ ರವಿಕುಮಾರ್, ಕಾರ್ತಿಕ್ ಮತ್ತು ನಿಖಿಲ್ ನಾಯಕ್‌ನನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು.
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ವಿಜಯನಗರ ಉಪವಿಭಾಗ ಪೊಲೀಸರು ನಟ ದರ್ಶನ್, ಪವಿತ್ರಾ ಗೌಡ ಸೇರಿ 17 ಆರೋಪಿಗಳನ್ನು ಬಂಧಿಸಿದ್ದಾರೆ. ಕಸ್ಟಡಿ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಗುರುವಾರ 24ನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಿದ್ದರು. ಇದರಲ್ಲಿ ಹೆಚ್ಚಿನ ವಿಚಾರಣೆ ಬಾಕಿ ಇರುವ ಕಾರಣಕ್ಕೆ ನಟ ದರ್ಶನ್, ಧನರಾಜ್, ವಿನಯ್ ಮತ್ತು ಪ್ರದೂಷ್‌ನನ್ನು ಪೊಲೀಸ್ ಕಸ್ಟಡಿಗೆ ನೀಡಬೇಕು.
ಪವಿತ್ರಾ ಗೌಡ, ಪವನ್, ರಾಘವೇಂದ್ರ, ನಂದೀಶ್, ಜಗದೀಶ್, ಅನುಕುಮಾರ್, ನಾಗರಾಜ್, ಲಕ್ಷ್ಮಣ್, ದೀಪಕ್ ಮತ್ತು ಕೇಶವಮೂರ್ತಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ವಾದ ಮಂಡಿಸಿದರು.