ಪ್ರಾಣಿ ಪ್ರಿಯ ದರ್ಶನ್​ ಅಭಿಮಾನಿಯಿಂದ ಹುಚ್ಚಾಟ; ದರ್ಶನ್​ಗೆ ಹಾವಿನ ಹಾರ ಹಾಕಿದ ಅಭಿಮಾನಿ

snake
Published on

ಬೆಂಗಳೂರು: ನಟ ದರ್ಶನ್​ ಪ್ರಾಣಿ ಪ್ರಿಯರು. ಸಮಯ ಸಿಕ್ಕಾಗೆಲ್ಲ ಅಭಯಾರಣ್ಯಗಳಿಗೆ ತೆರಳಿ ಪ್ರಾಣಿಗಳ ಫೋಟೋ ಕ್ಲಿಕ್ಕಿಸುವ ನಟ ತಮ್ಮ ಮನೆಯಲ್ಲಿಯೂ ಸಹ ಅನೇಕ ಪ್ರಾಣಿಗಳನ್ನು ಸಾಕಿ ಸಲಹುತ್ತಿದ್ದಾರೆ. ನಟ ಪ್ರಾಣಿಗಳನ್ನು ಮಕ್ಕಳಂತೆ ಸಾಕುತ್ತಿದ್ದರೆ ಅವರ ಅಭಿಮಾನಿಗಳಲ್ಲೊಬ್ಬ ಮಾತ್ರ ಅದೇ ಪ್ರಾಣಿಗಳನ್ನು ಮನಸೋ ಇಚ್ಛೆ ಹಿಂಸಿಸುತ್ತಿದ್ದಾನೆ.

ಆಟೋ ಚಾಲಕನಾಗಿರುವ ರುದ್ರೇಶ್​ ಹೆಸರಿನ ದರ್ಶನ್​ ಅಭಿಮಾನಿಯೊಬ್ಬ ತನ್ನ ಆಟೋದ ಹಿಂದೆ ದರ್ಶನ್​ ಫೋಟೋ ಹಾಕಿಸಿಕೊಂಡಿದ್ದು, ಅದಕ್ಕೆ ಹಾವಿನ ಮಾಲೆ ಹಾಕುವ ಮೂಲಕ ಹುಚ್ಚಾಟ ಮೆರೆದಿದ್ದಾನೆ. ಕೇರೆ ಹಾವೊಂದರ ಬಾಲ ಮತ್ತು ತಲೆಯನ್ನು ಹಿಡಿದುಕೊಂಡು ಅದನ್ನು ದರ್ಶನ್​ ಫೋಟೋಕ್ಕೆ ಹಾಕುತ್ತಿರುವಂತೆ ವಿಡಿಯೋ ಮಾಡಿದ್ದು ಅದನ್ನು ಇನ್ಸ್ಸಾಗ್ರಾಮ್​ನಲ್ಲಿ ದರ್ಶನ್​ ಅಭಿಮಾನಿಗಳ ಪೇಜ್​ ಒಂದರಲ್ಲಿ ಹಾಕಲಾಗಿದೆ. ಫ್ಯಾನ್​ ಕ್ರೇಜ್​ ಎನ್ನುವ ಕ್ಯಾಪ್ಷನ್​ನೊಂದಿಗೆ ಹಾಕಲಾಗಿರುವ ಈ ವಿಡಿಯೋ ಬಗ್ಗೆ ಅನೇಕರು ಆಕ್ರೋಷ ವ್ಯಕ್ತ ಪಡಿಸುತ್ತಿದ್ದಾರೆ.

1972ರ ಅರಣ್ಯ ಸಂರಕ್ಷಣಾ ಕಾಯ್ದೆ ಅನ್ವಯ ಕೇರೆ ಹಾವು ಸಂರಕ್ಷಿಸಲ್ಪಟ್ಟ ಜೀವಿಯಾಗಿದೆ. ಹಾಗಿರುವಾಗ ಆ ಹಾವನ್ನು ಈ ರೀತಿಯಲ್ಲಿ ಹಿಂಸಿಸುತ್ತಿರುವುದು ಶಿಕ್ಷಾರ್ಹ ಅಪರಾಧ ಎಂದು ನೆಟ್ಟಿಗರು ಹೇಳುತ್ತಿದ್ದು ಈ ವಿಚಾರವಾಗಿ ದೂರು ನೀಡಲು ವನ್ಯ ಜೀವಿ ಪ್ರೇಮಿ ರಾಜೇಶ್​ ಮುಂದಾಗಿದ್ದಾರೆ.

ಈ ಹಿಂದೆ ನಟ ದರ್ಶನ್​ ಸಾರ್ವಜನಿಕರಲ್ಲಿ ಹಾವುಗಳನ್ನು ಸಂರಕ್ಷಿಸುವಂತೆ ಕೇಳಿಕೊಂಡಿದ್ದರು. ನಾವೆಲ್ಲರೂ ಆಹಾರ ಸರಪಳಿಯಲ್ಲಿ ಒಬ್ಬರಿಗೊಬ್ಬರು ಅವಲಂಬಿತರಾಗಿದ್ದೇವೆ. ಹಾವಿದ್ದರೆ ಮಾತ್ರ ಮನುಷ್ಯ ಇರಲು ಸಾಧ್ಯ. ನಿಮ್ಮ ಮನೆ ಹತ್ತಿರ ಅಥವಾ ರಸ್ತೆಯಲ್ಲಿ ಹಾವು ಕಂಡರೆ ಅದನ್ನು ಸಾಯುಸಬೇಡಿ, ಹಿಂಸಿಸಬೇಡಿ ಎಂದು ನಟ ಮನವಿ ಮಾಡಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net