

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಕೇಸ್ನಲ್ಲಿ ನಟ ದರ್ಶನ್ ಹಾಗೂ ಸಹಚರರಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಸ್ತರಿಸಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ. ನಿಜಜೀವನದಲ್ಲಿ ಮಾದರಿಯಾಗಬೇಕಿದ್ದ ಸ್ಟಾರ್ನಟನೊಬ್ಬನ ಈ ಕೃತ್ಯ ಪರ-ವಿರೋಧದ ಚರ್ಚೆಗೆ ಎಡೆ ಮಾಡಿಕೊಟ್ಟಿದ್ದು, ದಿನ ಕಳೆದಂತೆ ಪ್ರಕರಣದ ತೀವ್ರತೆ ಹೆಚ್ಚಾಗುತ್ತ ಹೋಗುತ್ತಿದೆ. ಇತ್ತ ನೆಚ್ಚಿನ ನಟನನ್ನು ನೋಡುವ ಆಸೆಯೊಂದಿಗೆ ಅಭಿಮಾನಿಗಳು ಪ್ರತಿನಿತ್ಯ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡುತ್ತಿದ್ದು, ಇದೀಗ ಮಹಿಳೆಯೊಬ್ಬರು ದಾಸನಿಗಾಗಿ ಜೈಲಿಗೆ ಚಕ್ಕುಲಿಯನ್ನು ತಂದಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಟ ದರ್ಶನ್ ಮನೆ ಊಟದ ಜೊತೆಗೆ, ಹಾಸಿಗೆ, ಬಟ್ಟೆಯನ್ನು ಕೊಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ದರ್ಶನ್ ಅವರ ಮನವಿಯನ್ನು ತಿರಸ್ಕರಿಸಿದ್ದು, ಚಕ್ರವರ್ತಿಗೆ ಜೈಲೂಟವೇ ಗತಿಯಾಗಿದೆ. ಇದರ ನಡುವೆಯೇ ದರ್ಶನ್ಗಾಗಿ ಮಹಿಳಾ ಅಭಿಮಾನಿಯೊಬ್ಬರು ಚಕ್ಕುಲಿಯನ್ನು ತಂದಿರುವುದು ಎಲ್ಲರ ಗಮನ ಸೆಳೆಯುತ್ತಿದೆ.
ಮೈಸೂರಿನ ಸರಸ್ವತಿಪುರಂ ಮೂಲದ ಮಹಿಳೆ ಮಂಜುಳಾ ದರ್ಶನ್ ಭೇಟಿಗೆ ಆಗಮಿಸಿದ್ದು, ದರ್ಶನ್ಗಾಗಿ ರೈಸ್ಬಾತ್, ಚಕ್ಕುಲಿ ಮಾಡಿಕೊಂಡು ತಂದಿದ್ದು, ಜೈಲಿನ ಒಳಗೆ ಬಿಡುವಂತೆ ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ. ಇನ್ನು ಈ ಕುರಿತು ಮಾತನಾಡಿದ ಅವರು, ದರ್ಶನ್ ತಪ್ಪು ಮಾಡಿದ್ದರೆ ತಪ್ಪೇ, ನಮಗೂ 2 ದಿನ ಬೇಜಾರಾಗಿತ್ತು. ಹಾಗಂತ ಬಿಟ್ಟು ಬಿಡೋಕಾಗುತ್ತಾ, ದಯವಿಟ್ಟು ಒಳಗೆ ಬಿಡಿ. ಮಾಧ್ಯಮದವರು ಸಹಾಯ ಮಾಡಿ ನಮನ್ನು ಒಳಗೆ ಕಳಿಸಿ ಎಂದು ಮನವಿ ಮಾಡಿದ್ದಾರೆ.
ಜೈಲು ಸೇರಿರುವ ನಟ ದರ್ಶನ್‌ಗೆ ಮನೆಯೂಟ, ಪುಸ್ತಕ ಹಾಸಿಗೆ ಕೋರಿ ನಟ ದರ್ಶನ್ ತಮ್ಮ ವಕೀಲರ ಮೂಲದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಜೈಲಿನಲ್ಲಿರುವ ವಿಚಾರಾಣಾಧೀನ ಖೈದಿಗಳು ಮನೆಯಿಂದ ಊಟ, ಬಟ್ಟೆ, ಹಾಸಿಗೆ ಪಡೆಯಲು ಅವಕಾಶ ಇದೆ ಎಂದು ದರ್ಶನ್ ಪರ ವಕೀಲರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ದರ್ಶನ್ ಮನವಿಯನ್ನು ತಿರಸ್ಕರಿಸಿದ್ದಾರೆ.