

ಶಿವಮೊಗ್ಗ: ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ 50 ವರ್ಷಗಳು ಸಂದ ಹಿನ್ನೆಲೆಯಲ್ಲಿ ಶ್ರೀಗಂಧ ಸಂಸ್ಥೆ ಹಾಗೂ ಮಂಥನ ಟ್ರಸ್ಟ್‌ನಿಂದ ಜು.25ರ ಸಂಜೆ 5.30ಕ್ಕೆ ಶುಭ ಮಂಗಳ ಸಮುದಾಯ ಭವನದಲ್ಲಿ ಕರಾಳ ಅಧ್ಯಾಯ-50 ವರ್ಷ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಗಂಧ ಸಂಸ್ಥೆ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸೆರೆಮನೆಯ ಶಿಕ್ಷೆ ಅನುಭವಿಸಿದ ಶಿವಮೊಗ್ಗದ ಹಿರಿಯ ನಾಗರಿಕರನ್ನು ಗೌರವಿಸಲಾಗುವುದು. ನಿವೃತ್ತ ಯೋಧರನ್ನು ಸನ್ಮಾನಿಸಲಾಗುವುದು. ತುರ್ತು ಪರಿಸ್ಥಿತಿ ಕರಾಳ ನೆನಪಿಗಾಗಿ ನಗರದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ದೇಶಭಕ್ತಿಗೀತೆಯ ಸಮೂಹ ಗಾಯನ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಗುವುದು. ವಿಜೇತ ತಂಡಗಳು ದೇಶಭಕ್ತಿ ಗೀತೆಗಳ ಸಮೂಹ ಗಾಯನ ನಡೆಸಿಕೊಡಲಿವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ತುರ್ತು ಪರಿಸ್ಥಿತಿಯಲ್ಲಿ ಜೈಲುವಾಸ ಅನುಭವಿಸಿದ, ಎಂಎಡಿಬಿ ಮಾಜಿ ಅಧ್ಯಕ್ಷ ಎ.ಎಸ್.ಪದ್ಮನಾಭ ಭಟ್ ಕಾರ್ಯಕ್ರಮ ಉದ್ಘಾಟಿಸುವರು. ಸಾಹಿತಿ ಜಿ.ಬಿ.ಹರೀಶ್ ಮುಖ್ಯ ಭಾಷಣ ಮಾಡುವರು. ಅಜೇಯ ಕೃತಿಕಾರ, ಹಿರಿಯ ಸಾಹಿತಿ, ರಾಷ್ಟ್ರವಾದಿ ಚಿಂತಕ ಬಾಬು ಕೃಷ್ಣಮೂರ್ತಿ ಅವರಿಗೆ ನಾಗರಿಕ ಸನ್ಮಾನ ಏರ್ಪಡಿಸಲಾಗಿದೆ. ಮಂಥನ ಟ್ರಸ್ಟ್‌ನ ಟ್ರಸ್ಟಿ ವಾಸುದೇವ್, ಶ್ರೀಗಂಧ ಸಂಸ್ಥೆಯ ಖಜಾಂಚಿ ಕೆ.ಇ.ಕಾಂತೇಶ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಉಮೇಶ್ ಆರಾಧ್ಯ, ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಕುಬೇರಪ್ಪ, ರಾಜು ಇತರರಿದ್ದರು.