

ಬೆಂಗಳೂರು: ಪ್ರಸ್ತುತ ಸನ್ನಿವೇಶದಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಅಪಾಯ ಎದುರಾಗಿದೆ. ಈ ಎರಡೂ ಉಳಿದಲ್ಲಿ ಮಾತ್ರ ಜನ ಉಳಿಯಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಗೌರಿ ಸ್ಮಾರಕ ಟ್ರಸ್ಟ್ ಪತ್ರಕರ್ತೆ ಗೌರಿ ಲಂಕೇಶ್ ಸ್ಮರಣಾರ್ಥ ಪುರಭವನದಲ್ಲಿ ಹಮ್ಮಿಕೊಂಡಿದ್ದ ‘ಗೌರಿ ನೆನಪು-ಸರ್ವಾಧಿಕಾಲದ ಹೊತ್ತಲ್ಲಿ ದೇಶವನ್ನು ಮರುಕಟ್ಟುವ ಕಲ್ಪನೆ’ ಸಂವಾದ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಮಹಾತ್ಮಗಾಂಧಿಯನ್ನು ಕೊಂದ ಮನಸ್ಥಿತಿಯೇ ಗೌರಿ ಲಂಕೇಶ್, ದಾಭೋಲ್ಕರ್, ಪನ್ಸಾರೆ, ಎಂ.ಎಂ.ಕಲ್ಬುರ್ಗಿ ಅವರನ್ನು ಕೊಂದಿದೆ. ಕೋಮುವಾದ ವಿರುದ್ಧ ದನಿಯೆತ್ತಿದವರನ್ನು ಹತ್ತಿಕ್ಕುವ, ಜೀವಭಯ ಉಂಟುಮಾಡಲಾಗುತ್ತಿದೆ. ಇಂತಹವರೇ ಸಮಾಜಕ್ಕೆ ಅಪಾಯಕಾರಿ ಆಗಿ ಕಾಡುತ್ತಿದ್ದಾರೆ ಎಂದು ಪ್ರತಿಪಾದಿಸಿದರು.
ಇತ್ತೀಚಿಗೆ ವಿಚಾರವಾದಿಗಳು, ಸಾಹಿತಿಗಳಿಗೆ ಬೆದರಿಕೆ ಪತ್ರಗಳು ಬರುತ್ತಿವೆ. ಇಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಮೈಸೂರಿನಲ್ಲಿ ಡಿವೈಎಸ್‌ಪಿ ನೇತೃತ್ವದಲ್ಲಿ ಪ್ರತ್ಯೇಕ ಕೇಂದ್ರ ರಚಿಸಲಾಗಿದೆ. ಬೆದರಿಕೆ ಪತ್ರಗಳನ್ನು ಬರೆಯುವವರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಲಿದ್ದೇವೆ ಎಂದರು.
ಗೌರಿ ಹಂತಕರಿಗೆ ಶಿಕ್ಷೆ ನಿಶ್ಚಿತ:
ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರಸ್ತುತ ವಿಚಾರಣೆ ಪ್ರಗತಿಯಲ್ಲಿದ್ದು, ಚಾರ್ಜ್‌ಶೀಟ್ ಕೂಡ ಹಾಕಲಾಗಿದೆ. ಯಾವುದೇ ಕಾರಣಕ್ಕೂ ಆರೋಪಿಗಳು ಶಿಕ್ಷೆಯಿಂದ ಪಾರಾಗಲು ಬಿಡುವುದಿಲ್ಲ. ಈಗಾಗಲೇ 500ಕ್ಕೂ ಹೆಚ್ಚು ಮಂದಿ ಸಾಕ್ಷ್ಯ ಸಂಗ್ರಹಿಸಿ 1,000 ಪುಟಗಳ ದೋಷಾರೋಪ ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಲಾಗಿದೆ. ಸದ್ಯ 80 ಮಂದಿಯ ಸಾಕ್ಷ್ಯ ವಿಚಾರಣೆ ಆಗಿದ್ದು, ಪ್ರತಿ ತಿಂಗಳು ಒಂದು ವಾರ ವಿಚಾರಣೆ ನಡೆಸಬೇಕೆಂಬ ಇಚ್ಛೆ ನಮ್ಮದಾಗಿದೆ. ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಲಿದ್ದು, ಶೀಘ್ರವೇ ಎಲ್ಲರಿಗೂ ಸಮಾಧಾನಕರವಾದ ತೀರ್ಪು ಹೊರಬರುವ ನಿರೀಕ್ಷೆ ಇದೆ ಎಂದು ಸಿಎಂ ವಿವರಿಸಿದರು.
ಹೆಸರು ಬದಲಾವಣೆ ಅನಗತ್ಯ:
ಎಐಸಿಸಿ ವಕ್ತಾರೆ ಸುಪ್ರಿಯಾ ಶ್ರೀನಾಟೆ ಮಾತನಾಡಿ, ಇಂಡಿಯಾ ಹೆಮ್ಮೆಯ ಭಾರತವಾಗಿದೆ. ಆದರೆ, ಕೇಂದ್ರ ಸರ್ಕಾರ ಯಾವುದೋ ಉದ್ದೇಶವಿಟ್ಟುಕೊಂಡು ದೇಶದ ಹೆಸರನ್ನು ಬದಲಿಸಲು ಹೊರಟಿದೆ. ತನ್ನ ಮೂಗಿನ ನೇರಕ್ಕೆ ಅನರ್ಥ ಕೆಲಸ ಮಾಡಲು ನಾವು ಅವಕಾಶ ಮಾಡಿಕೊಡುವುದಿಲ್ಲ. ಇದರ ವಿರುದ್ಧ ಒಟ್ಟಾಗಿ ಹೋರಾಟ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ನ್ಯಾಯಪಥ ಪತ್ರಿಕೆಯು ಹೊರತಂದಿರುವ ‘ಅಸಮಾನತೆಯ ನೆಲ-ನೆಲೆ’ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಆಂಜನೇಯ, ಕೇರಳದ ಮಾಜಿ ಸಚಿವೆ ಶೈಲಜ ಟೀಚರ್, ಮಾನವಹಕ್ಕು ಹೋರಾಟಗಾರ್ತಿ ತೀಸ್ತಾ ಸೆತಲ್ವಾಡ್, ಮೇಘಾಲಯದ ರಾಜಕೀಯ ಕಾರ್ಯಕರ್ತೆ ಏಂಜೆಲಾ ರಂಗದ್, ಬಹುಭಾಷಾ ನಟ ಪ್ರಕಾಶ್ ರೈ, ಮುಸ್ಲಿಂ ಒಕ್ಕೂಟದ ಮುಖಂಡ ಯಾಸಿನ್ ಮಲ್ಪೆ ಹಾಗೂ ಮತ್ತಿತರರಿದ್ದರು.
ಪ್ರಧಾನಿ ಮೋದಿ ಎಂಎಸ್‌ಪಿ ಗ್ಯಾರಂಟಿ ಕಾನೂನನ್ನು ಜಾರಿಗೆ ತರಬೇಕು. ಇದಕ್ಕಾಗಿ ಪ್ರೊ.ಸ್ವಾಮಿನಾಥನ್ ವರದಿಯನ್ನು ಆಧಾರವಾಗಿಟ್ಟುಕೊಳ್ಳಬೇಕು. ಕರ್ನಾಟಕದಲ್ಲೂ ಕಬ್ಬು ಸೇರಿದಂತೆ ಇತರ ಬೆಳೆಗಾರರ ಅಹವಾಲನ್ನು ಕಾಂಗ್ರೆಸ್ ಸರ್ಕಾರ ಸಹಾನುಭೂತಿಯಿಂದ ಆಲಿಸಬೇಕು.
- ರಾಕೇಶ್ ಟಿಕಾಯತ್, ರಾಷ್ಟ್ರೀಯ ರೈತ ಮುಖಂಡ