

ಹೊಳೆಹೊನ್ನೂರು: ಶಿವಮೊಗ್ಗ- ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ-13 ಹಾಗೂ ಸೇತುವೆ ನಿರ್ಮಾಣ ನೆಪದಲ್ಲಿ ರೈತರ ಅಡಕೆ ತೋಟ, ವಿದ್ಯುತ್ ಕಂಬ ಹಾಳುಗೆಡವಿರುವುದನ್ನು ವಿರೋಧಿಸಿ ಸ್ಥಳೀಯ ರೈತರು ಹೊಳೆಬೆಳಗಲು ಕ್ರಾಸ್ ಹತ್ತಿರದ ಹೊಸ ಸೇತುವೆ ಕಾಮಗಾರಿ ಸ್ಥಳದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಬೆಳಗಲು ಗ್ರಾಮ ಸರ್ವೇ ನಂ.73/5 ಜಮೀನು ರಸ್ತೆಯನ್ನು ಭದ್ರಾನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲು 9.08 ಗುಂಟೆ ಭೂ ಸ್ವಾಧೀನಪಡಿಸಿಕೊಳ್ಳಲಾಗಿದೆ. ಹೆದ್ದಾರಿ ಕಾಮಗಾರಿ ವೇಳೆ ನದಿ ದಡದಲ್ಲಿರುವ ಉಳಿದ ಅಡಕೆ ತೋಟ ಕುಸಿದು ನದಿ ಪಾಲಾಗುತ್ತಿದೆ. ಜತೆಗೆ ಅಂಚಿನಲ್ಲಿದ್ದ ವಿದ್ಯುತ್ ಕಂಬ ಕೂಡ ಬಿದ್ದುಹೋಗಿದ್ದು ಸಂಪರ್ಕ ಕಡಿತಗೊಂಡಿದೆ ಎಂದು ದೂರಿದರು. ವಿದ್ಯುತ್ ಸಂಪರ್ಕವಿಲ್ಲದ ಕಾರಣ ಮುಂದಿನ ಭಾಗದ ರೈತರ ಜಮೀನುಗಳಿಗೆ ಹೊಳೆ ನೀರು ಹಾಯಿಸಲು ಸಾಧ್ಯವಾಗದೆ ಬೆಳೆ ಒಣಗುತ್ತಿವೆ ಎಂದರು.
ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಅವರಿಗೆ ಹಲವುಬಾರಿ ಗಮನಕ್ಕೆ ತಂದರೂ ನಿರ್ಲಕ್ಷೃ ಮಾಡುತ್ತಿದ್ದಾರೆ. ಈ ಸಂಬಂಧ ನ್ಯಾಯಾಲಯದಲ್ಲಿ ದಾವಾ ಹೂಡಲಾಗಿದೆ. ಆದರೂ ಹೆದ್ದಾರಿ ಅಧಿಕಾರಿಗಳು ಸ್ಪಂದಿಸಿಲ್ಲ. ಸಂಬಂಧಿಸಿದ ಇಂಜಿನಿಯರ್‌ಗಳು ತಕ್ಷಣ ಸ್ಥಳ ಪರಿಶೀಲಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಇಂಜಿನಿಯರ್ ನಾಗೇಂದ್ರಪ್ಪ ಮಾತನಾಡಿ, ರೈತರಿಗೆ ತೊಂದರೆ ಆಗದಂತೆ ಎಚ್ಚರಿಕೆಯಿಂದ ಕಾಮಗಾರಿ ಮಾಡಲಾಗುತ್ತಿದೆ. ಆದರೆ ಇತ್ತೀಚೆಗೆ ಮಳೆ ಹೆಚ್ಚಾಗಿ ನದಿ ಅಂಚಿನಲ್ಲಿ ಮಣ್ಣು ಕೊಚ್ಚಿ ಹೋಗಿದೆ. ಇದರಿಂದ ಅಡಕೆ ಮರ ಹಾಗೂ ವಿದ್ಯುತ್ ಕಂಬ ಬಿದ್ದಿರುತ್ತವೆ. ತಕ್ಷಣ ಮೆಸ್ಕಾಂ ಇಂಜಿನಿಯರ್ ಅವರನ್ನು ಸ್ಥಳಕ್ಕೆ ಕರೆಸಿ ವಿದ್ಯುತ್ ಲೈನ್ ಸರಿಪಡಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ತಡೆಗೋಡೆ ನಿರ್ಮಿಸಿ ಜಮೀನು ಹಾಳಾಗದಂತೆ ಸರಿಪಡಿಸಲಾಗುತ್ತದೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.
ರೈತ ಮುಖಂಡ ಗೋಪಾಲಕೃಷ್ಣ ಪಂಡಿತ್, ಚಿಕ್ಕೂಡ್ಲಿ ಪ್ರಭಾಕರ, ವಿಜಯ್‌ಕುಮಾರ್, ವಸಂತಕುಮಾರ್ ಇತರರಿದ್ದರು.