ದಲಿತ ನಾಯಕ ಎಂ.ಜಯಣ್ಣ ಇನ್ನಿಲ್ಲ : ಬಯಲುಸೀಮೆ ಭಗೀರಥ ದಲಿತ ಪರ ಹೋರಾಟ ನೂರಾರು ಪ್ರೊ.ಬಿಕೆ ಪ್ರೀತಿಯ ಶಿಷ್ಯ

Jayanna
Published on

ಚಿತ್ರದುರ್ಗ : ನೀರಾವರಿ ಹೋರಾಟಗಾರ, ದಲಿತ ಚಳವಳಿಯ ಮುಂಚೂಣಿ ನಾಯಕ ಚಿತ್ರದುರ್ಗದ ಎಂ.ಜಯಣ್ಣ (70) ಸೋಮವಾರ ರಾತ್ರಿ ನಿಧನರಾದರು.

ಈಚೆಗೆ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಮಂಗಳವಾರ ಚಿತ್ರದುರ್ಗ ನಗರದಲ್ಲಿ ಅಂತ್ಯಕ್ರಿಯೆ ಜರುಗಲಿದೆ.

ಪ್ರೊ.ಬಿ.ಕೃಷ್ಣಪ್ಪ ನಾಯಕತ್ವದಲ್ಲಿ ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿಯ ಹೋರಾಟಗಳಲ್ಲಿ ಮುಂಚೂಣಿ ನಾಯಕರಾಗಿದ್ದರು. ಚಂದ್ರಗುತ್ತಿ ಬೆತ್ತಲೆ ಸೇವೆ, ಕಂಬಾಲಪಲ್ಲಿ ದಲಿತ ಹತ್ಯೆ, ಮೌಢ್ಯಾಚಾರಣೆ ಸೇರಿ ವಿವಿಧ ಜನವಿರೋಧಿ ನಿಲುವುಗಳ ವಿರುದ್ಧ ರಾಜ್ಯದ ವಿವಿಧೆಡೆ ಕಾಲ್ನಡಿಗೆ ಜಾಥಾ ನಡೆಸಿದ್ದರು. ಕಾನ್ಶಿರಾಂ ಅವರಿಂದ ಪ್ರಭಾವಿತರಾಗಿ ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಜಯಣ್ಣ, ಭರಮಸಾಗರ, ಮೊಳಕಾಲ್ಮೂರು ವಿಧಾನಸಭೆ, ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗಮನ ಸೆಳೆದಿದ್ದರು. ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರಾಗಿ ಬಯಲುಸೀಮೆಗೆ ಭದ್ರೆ ಹರಿಸಲು ಸುದೀರ್ಘ ಎರಡು ದಶಕಗಳ ಹೋರಾಟ ನಡೆಸಿದ್ದರು. ರಾಜ್ಯದಲ್ಲಿ ನೂರಾರು ಹೋರಾಟಗಳ ನೇತೃತ್ವ ವಹಿಸಿಕೊಂಡಿದ್ದ ಜಯಣ್ಣ ಬಿಎಸ್‌ಪಿ, ಗಡ್ಡದ ಜಯಣ್ಣ ಎಂದು ಗುರುತಿಸಿಕೊಂಡಿದ್ದರು. ರಾಜ್ಯದ ದಲಿತ ಕೇರಿಗಳಿಗೆ ತೆರಳಿ ಸಮಸ್ಯೆ ಇತ್ಯರ್ಥಪಡಿಸುತ್ತಿದ್ದರು.

ಜಾತ್ಯತೀತ ವ್ಯಕ್ತಿ: ದಲಿತ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರೂ ಮೇಲ್ವರ್ಗದ ಜನರ ಪ್ರೀತಿಗೂ ಪಾತ್ರರಾಗಿದ್ದರು. ಜಾತಿ ಸಂಘರ್ಷ ಎದುರಾಗದಂತೆ ಸಮಸ್ಯೆಗಳ ಇತ್ಯರ್ಥಕ್ಕೆ ಆದ್ಯತೆ ನೀಡುತ್ತಿದ್ದರು. ಮುರುಘಾ ಮಠದಿಂದ ಶೂನ್ಯಪೀಠ, ರಾಜ್ಯ ಸರ್ಕಾರದಿಂದ ಅಂಬೇಡ್ಕರ್, ಬಾಬು ಜಗಜೀವನ್‌ರಾಂ ಸೇರಿ ಹತ್ತಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

ಜಯಣ್ಣ ಪರ ಪ್ರಚಾರಕ್ಕೆ ಮಾಯಾವತಿ ಬಂದಿದ್ದರು: ಭರಮಸಾಗರ ಹಾಗೂ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಎಸ್ಪಿಯಿಂದ ಕಣಕ್ಕೆ ಇಳಿದಿದ್ದ ಜಯಣ್ಣ ಪರ ಪ್ರಚಾರ ಮಾಡಲು ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಆಗಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net