

DMK Councillor: ತಮಿಳುನಾಡಿನ ವಿಲ್ಲಪುರಂ ಜಿಲ್ಲೆಯ ದಲಿತ ಪುರಸಭೆ ಅಧಿಕಾರಿಯೊಬ್ಬರು ಆಡಳಿತರೂಢ ಡಿಎಂಕೆ ಮಹಿಳಾ ಕೌನ್ಸಿಲರ್ ಒಬ್ಬರ ಕಾಲಿಗೆ ಬಿದ್ದಿರುವ ವಿಡಿಯೋ ವೈರಲ್ ಆಗಿದ್ದು, ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಘಟನೆ ಸಂಬಂಧ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
56 ಸೆಕೆಂಡುಗಳ ವಿಡಿಯೋ ವೈರಲ್ ಆಗಿದ್ದು, ವಿಡಿಯೋದಲ್ಲಿ ಪುರಸಭೆ ಕಿರಿಯ ಸಹಾಯಕ ಅಧಿಕಾರಿ ಮುನಿಯಪ್ಪನ್, ಚರ್ಚೆಯ ಸಮಯದಲ್ಲಿ ಡಿಎಂಕೆ ಕೌನ್ಸಿಲರ್ ರಮ್ಯಾ ಅವರ ಕಾಲಿಗೆ ಬೀಳುವುದು. ರಮ್ಯಾ ಅದಕ್ಕೆ ಆಕ್ಷೇಪ ವ್ಯಕ್ತಪಡಿಸುವುದು ವಿಡಿಯೋದಲ್ಲಿದೆ.
ಘಟನೆ ಬಗ್ಗೆ ಮೊದಲು ಠಾಣೆಗೆ ದೂರು ನೀಡಿದ್ದ ಅಧಿಕಾರಿ, ಸ್ವಯಂಪ್ರೇರಣೆಯಿಂದ ಕಾಲಿಗೆ ಬಿದ್ದಿರುವುದಾಗಿ ಹೇಳಿಕೆ ನೀಡಿದ್ದಾರೆನ್ನಲಾಗಿದೆ. ಬಳಿಕ ಹೊಸ ದೂರು ನೀಡಿದ್ದು, ಅದರಲ್ಲಿ ರಮ್ಯಾ ಅವರೇ ತನ್ನ ಮುಂದೆ ಮಂಡಿಯೂರುವಂತೆ ಒತ್ತಾಯಿಸಿದರು ಎಂದು ಆರೋಪಿಸಿದ್ದಾರೆ.
ರಮ್ಯಾ ಈ ಹಿಂದೆ ಮುನಿಯಪ್ಪನ್ ವಿರುದ್ಧ ಪುರಸಭೆ ಆಯುಕ್ತರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಈ ವಿವಾದ ಉಂಟಾಗಿದೆ. ಅಧಿಕಾರಿ ನೀಡಿದ ದೂರಿನ ಮೇರೆಗೆ ತಮಿಳುನಾಡು ಪೊಲೀಸರು ರಮ್ಯಾ ಮತ್ತು ಇತರ ಕೆಲವರ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಘಟನೆ ಸಂಬಂಧ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ತನಿಖೆ ನಡೆಸಿದ್ದಾರೆ.
ಘಟನೆ ಬಗ್ಗೆ ಡಿಎಂಕೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ. ಡಿಎಂಕೆ ವಿರುದ್ದ ವಾಗ್ದಾಳಿ ನಡೆಸಿರುವ ಬಿಜೆಪಿ ನಾಯಕ ಕೆ.ಅಣ್ಣಾಮಲೈ, ಇದು ಡಿಎಂಕೆಯ ಸಾಮಾಜಿಕ ಅನ್ಯಾಯದ ಮಾದರಿ ಎಂದು ಕಿಡಿಕಾರಿದ್ದಾರೆ.(ಏಜೆನ್ಸೀಸ್)