ರಾಯ್​ಬರೇಲಿಯಲ್ಲಿ ದಲಿತ ವ್ಯಕ್ತಿಯ ಹತ್ಯೆ: ಸಂತ್ರಸ್ತ ಕುಟುಂಬವನ್ನು ಭೇಟಿಯಾದ ರಾಹುಲ್ ಗಾಂಧಿ| Rahul Gandhi

ವಿಜಯವಾಣಿ (53)
Published on

Rae Bareli: ಉತ್ತರ ಪ್ರದೇಶದ ರಾಯ್​ಬರೇಲಿಯಲ್ಲಿ ಕೆಲ ದಿನಗಳ ಹಿಂದೆ ಮಾಬ್​ ಲಿಂಚಿಂಗ್​ನಿಂದ ಹತ್ಯೆಗೀಡಾದ ಹರಿಓಂ ವಾಲ್ಮೀಕಿ ಎಂಬ ದಲಿತ ವ್ಯಕ್ತಿಯ ಕುಟುಂಬವನ್ನು ಇಂದು(ಅ. 17) ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.

ಅಕ್ಟೋಬರ್ 2ರಂದು ಬೆಳಗಿನ ಜಾವ ಒಂದು ಗಂಟೆ ಸುಮಾರಿಗೆ ಕಳ್ಳನೆಂದು ಭಾವಿಸಿ ಹರಿಓಂ ವಾಲ್ಮೀಕಿಯನ್ನು ಒಂದು ಗುಂಪು ಹಲ್ಲೆ ಮಾಡಿ ಕೊಲೆ ಮಾಡಿತ್ತು. ಈ ಘಟನೆಯು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಸೇರಿದಂತೆ ವಿರೋಧ ಪಕ್ಷಗಳು ಉತ್ತರ ಪ್ರದೇಶದ ಬಿಜೆಪಿ ಸರ್ಕಾರವು ದಲಿತರನ್ನು ರಕ್ಷಿಸುವಲ್ಲಿ ಮತ್ತು ಗುಂಪು ಹಿಂಸಾಚಾರವನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದವು.

ಘಟನೆ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅ. 10ರಂದು ಎನ್‌ಕೌಂಟರ್ ಮಾಡಿ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಪ್ರಮುಖ ಆರೋಪಿ ಸೇರಿದಂತೆ 14 ಜನರನ್ನು ಬಂಧಿಸಿದ್ದಾರೆ. ಪ್ರಕರಣವನ್ನು ನಿರ್ವಹಿಸುವಲ್ಲಿನ ಲೋಪಕ್ಕಾಗಿ ಇಬ್ಬರು ಸಬ್ ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಐದು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

ಇಂದು ಚಕೇರಿ ವಿಮಾನ ನಿಲ್ದಾಣದಿಂದ 80ಕಿಮೀ ರಸ್ತೆ ಮೂಲಕ ಪತ್ತೇಫುರಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ, ಮೃತರ ಕುಟುಂಬ ಸದಸ್ಯರನ್ನು ಭೇಟಿಯಾದರು. ಗಾಂಧಿ ಕುಟುಂಬ ಸದಸ್ಯರೊಂದಿಗೆ ಸಂವಹನ ನಡೆಸಿದರು. ಈ ಭೇಟಿಗೂ ಮುನ್ನ ಯುಪಿ ಸರ್ಕಾರ ಹರಿಓಂ ಅವರ ಸಹೋದರಿ ಕುಸುಮ್ ಅವರಿಗೆ ಫತೇಪುರ್ ವೈದ್ಯಕೀಯ ಕಾಲೇಜಿನಲ್ಲಿ ಸ್ಟಾಫ್ ನರ್ಸ್ ಆಗಿ ಗುತ್ತಿಗೆ ಆಧಾರಿತ ಹುದ್ದೆಯನ್ನು ನೀಡಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net