ಪ್ರಕರಣ ಹಿಂಪಡೆಯಲು ನಿರಾಕರಿಸಿದ್ದಕ್ಕೆ ದಲಿತ ವ್ಯಕ್ತಿ ಹತ್ಯೆ; 8 ಆರೋಪಿಗಳು ಅರೆಸ್ಟ್​

Assault
Published on

ಭೋಪಾಲ್​: ಪ್ರಕರಣ ಹಿಂಪಡೆಯಲು ನಿರಾಕರಿಸಿದ ಕಾರಣಕ್ಕೆ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿ ಒಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿ ಅವರ ತಾಯಿಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿರುವ ಘಟನೆ ಮಧ್ಯಪ್ರದೇಶದ ಸಾಗರ್​ ಜಿಲ್ಲೆಯಲ್ಲಿ ನಡೆದಿದೆ.

ಪ್ರಕರಣ ಸಂಬಂಧ ಪೊಲೀಸರು ಹತ್ಯೆಯ ಪ್ರಮುಖ ಆರೋಪಿ ಸೇರಿದಂತೆ ಎಂಟು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಓರ್ವ ಆರೋಪಿ ತಲೆಮಾರಿಸಿಕೊಂಡಿದ್ದು, ಆತನನ್ನು ಪತ್ತೆಹಚ್ಚಲು ವಿಶೇಷ ತಂಡ ಒಂದನ್ನು ರಚಿಸಿದ್ದಾರೆ.

ಪ್ರಕರಣದ ಹಿನ್ನಲೆ

ಹತ್ಯೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಸಂಜೀವ್,​ ಸಂತ್ರಸ್ತ ನಿತಿನ್​ ಅಹಿರ್​ವಾರ್​​(18) ಸಹೋದರಿ ಆರೋಪಿಗಳ ವಿರುದ್ಧ 2019ರಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಆರೋಪಿಗಳು ನಿತಿನ್​​ ಹಾಗೂ ಅವರ ಕುಟುಂಬಸ್ಥರಿಗೆ ಪ್ರಕರಣವನ್ನು ಹಿಂಪಡೆಯುವಂತೆ ಒತ್ತಡ ಹೇರುತ್ತಿದ್ದರು.

Dalit Youth

ಪ್ರಕರಣ ಹಿಂಪಡೆಯಲು ನಿರಾಕರಿಸಿದಾಗ ಘಟನೆಯ ಪ್ರಮುಖ ಆರೋಪಿ ವಿಕ್ರಂ ಸಿಂಗ್​ ಠಾಕೂರ್​ ತನ್ನ ಸಹಚರರ ಜೊತೆ ನಿತಿನ್​ ಮನೆಗೆ ನುಗ್ಗಿ ದಾಂಧಲೆ ನಡೆಸಿ ಯುವಕನನ್ನು ಕೊಲೆ ಮಾಡಿದ್ದಾನೆ. ಮಗನ ರಕ್ಷಣೆಗೆ ಧಾವಿಸಿದ ಅವರ ತಾಯಿಯ ಮೇಲೂ ಆರೋಪಿಗಳು ಹಲ್ಲೆ ನಡೆಸಿದ್ದು, ಅವರನ್ನು ವಿವಸ್ತ್ರಗೊಳಿಸಿ ಊರಿನಲ್ಲಿ ಮೆರವಣಿಗೆ ಮಾಡಿ ವಿಕೃತಿ ಮೆರೆದಿದ್ದಾರೆ.

ಪ್ರಕರಣ ಸಂಬಂಧ ಎಂಟು ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ಇನ್ನುಳಿದ ಓರ್ವ ಆರೋಪಿ ತಲೆಮಾರಿಸಿಕೊಂಡಿದ್ದಾನೆ. ಶೀಘ್ರದಲ್ಲೇ ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಸಂಜೀವ್ ತಿಳಿಸಿದ್ದಾರೆ.

ಕಿಡಿಕಾರಿದ ವಿಪಕ್ಷಗಳು

ಯುವಕನ ಹತ್ಯೆ ಬೆಳಕಿಗೆ ಬರುತ್ತಿದ್ದಂತೆ ಕಿಡಿಕಾರಿರುವ ವಿಪಕ್ಷಗಳು ದಲಿತರ ವಿಚಾರವಾಗಿ ಬಿಜೆಪಿ ಸರ್ಕಾರದ ದ್ವಂದ್ವ ನೀತಿಯನ್ನು ಎತ್ತಿ ತೋರಿಸುತ್ತಿದೆ. ಮಧ್ಯಪ್ರದೇಶದಲ್ಲಿ ಇಂತಹ ಹೇಯ ಕೃತ್ಯಗಳು ನಿರಂತರವಾಗಿ ನಡೆಯುತ್ತಿದ್ದು, ಬಿಜೆಪಿ ಸರ್ಕಾರ ಇಂತಹವುಗಳನ್ನು ನಿಗ್ರಹಿಸಲು ಯಾವುದೇ ಕಠಿಣ ಕ್ರಮಕೈಗೊಂಡಿಲ್ಲ.

ಬಿಜೆಪಿಯು ಮದ್ಯಪ್ರದೇಶವನ್ನು ದಲಿತರ ಮೇಲಿನ ತಾರತಮ್ಯದ ಪ್ರಯೋಗಾಲಯವನ್ನಾಗಿ ಮಾಡಿದೆ. ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಮುಗಿಲುಮುಟ್ಟಿದ್ದು, ಸರ್ಕಾರ ಯಾವುದೇ ರೀತಿಯ ಕ್ರಮ ಜರುಗಿಸದೆ ಇರುವುದು ಕಳವಳಕಾರಿಯಾಗಿದೆ ಎಂದು ವಿಪಕ್ಷಗಳು ಆಡಳಿತರೂಢ ಬಿಜೆಪಿ ವಿರುದ್ಧ ಹರಿಹಾಯ್ದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net