ಸಚಿವರಿಬ್ಬರಿಗೆ ದಲಿತ ಮುಖಂಡರ ಹಠಾತ್ ಮುತ್ತಿಗೆ

IMG-20240706-WA0008
Published on

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡ (ಕೆಲವು ಜಮೀನುಗಳ ವರ್ಗಾವಣೆ ನಿಷೇಧ) ಗಳಿಗೆ ಹಂಚಿಕೆಯಾದ ಜಮೀನು ಸಂರಕ್ಷಿಸುವ ಪಿಟಿಸಿಎಲ್ ಕಾಯ್ದೆ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಎಂದು ದಲಿತ ಮುಖಂಡರು ಸಿಟ್ಟಿಗೆದ್ದರು. ಹಠಾತ್ ಘೋಷಣೆ ಮೊಳಗಿಸಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಕೆ.ಎಚ್.ಮುನಿಯಪ್ಪ ಅವರಿಗೆ ಮುತ್ತಿಗೆ ಹಾಕಿದರು.

ವಿಧಾನಸೌಧ ಆವರಣದಲ್ಲಿ ಡಾ.ಬಾಬು ಜಗಜೀವನರಾಂ ಅವರ 38ನೇ ಸ್ಮರಣೆ ನಿಮಿತ್ತ ಬಾಬುಜಿ ಪ್ರತಿಮೆಗೆ ಸಿಎಂ ಸಿದ್ದರಾಮಯ್ಯ ಮಾಲಾರ್ಪಣೆ ಮಾಡಿ ತೆರಳಿದ ನಂತರ ಈ ಘಟನೆ ನಡೆಯಿತು.

ಸಚಿವರಿಬ್ಬರಿಗೆ ದಲಿತ ಕಾರ್ಯಕರ್ತರಯ ಘೇರಾಯಿಸಿದ್ದರಿಂದ ನೂಕಾಟ, ತಳ್ಳಾಟ ವಾಗ್ವಾದ ನಡೆಯಿತು. ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು. ಇದೇ ವೇಳೆ ಕಾಯ್ದೆ ಜಾರಿ ವಿಷಯದಲ್ಲಿ ಕಂದಾಯ ಇಲಾಖೆ, ಡಿಸಿ, ಎಸಿಗಳು ಆಸಕ್ತಿ ತೋರಿಸುತ್ತಿಲ್ಲ. ದಲಿತರ ಬದಲು ಉಳ್ಳವರ ಬಗ್ಗೆ ಹೆಚ್ಚಿನ ಕಾಳಜಿ, ತಮಗೆ ಬೇಕಾದ ರೀತಿಯಲ್ಲಿ ಆದೇಶ ಹೊರಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯ ನೇತೃತ್ವವಹಿಸಿದ್ದ ಮಂಜುನಾಥ್, ವೇಣುಗೋಪಾಲ ಮೌರ್ಯ ಇನ್ನಿತರ ಮುಖಂಡರು ಹೇಳಿದ್ದನ್ನು ಸಚಿವದ್ವಯರು ಸಾವಧಾನದಿಂದ ಆಲಿಸಿದರು. ಸರ್ಕಾರಕ್ಕೆ ಕಳಕಳಯಿರುವ ಕಾರಣಕ್ಕೆ ಕಾಯ್ದೆಗೆ ತಿದ್ದುಪಡಿ ತಂದು, ಪರಭಾರೆ ಕಟ್ಟುನಿಟ್ಟಾಗಿ ನಿಷೇಧಿಸಿದ್ದೇವೆ. ಇದೇ ಜು.8ಕ್ಕೆ ಎಲ್ಲ ಡಿಸಿಗಳ ಜತೆಗೆ ಸಭೆ ನಡೆಸಲಿದ್ದು, ಕಾಯ್ದೆ ಜಾರಿ ಪ್ರಗತಿ ಮಾಹಿತಿ ಪಡೆದು, ಕ್ರಮವಹಿಸುವೆ ಎಂದು ಡಾ.ಎಚ್.ಸಿ.ಮಹದೇವಪ್ಪ ಭರವಸೆ ನೀಡಿ, ರೊಚ್ಚಿಗೆದ್ದ ಮುಖಂಡರನ್ನು ಸಮಾಧಾನಪಡಿಸಿದರು‌.

ಇದಕ್ಕೂ ಮುನ್ನ ಬಾಬು ಜಗಜೀವನರಾಂ ಪ್ರತಿಮೆಗೆ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡುತ್ತಿದ್ದ ವೇಳೆ ದಲಿತ ಮುಖಂಡರು ಆಕ್ಷೇಪಿಸಿ, ದಲಿತರಿಗೆ ನ್ಯಾಯ ಕೊಡಿ ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net