8 ಕೋಟಿ ರೂ. ದೋಚಿದ್ದ ದಂಪತಿ ಕೇವಲ 10 ರೂ. ಜ್ಯೂಸ್ ಆಸೆಗೆ ಬಿದ್ದು ಜೈಲುಪಾಲು!

Police
Published on

ನವದೆಹಲಿ: ಕೋಟ್ಯಾಂತರ ರೂಪಾಯಿ ದರೋಡೆ ಯಶಸ್ವಿಯಾದ ಹಿನ್ನೆಲೆಯಲ್ಲಿ ತೀರ್ಥಯಾತ್ರೆ ಕೈಗೊಂಡಿದ್ದ ದಂಪತಿ ಅರ್ಧ ದಾರಿಯಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ. ಇದೀಗ ಪಂಜಾಬ್​ನ ಲೂಧಿಯಾನದಲ್ಲಿ ಜೂನ್ 10ರಂದು 8 ಕೋಟಿ ರೂ. ದೋಚಿದ್ದ ಆರೋಪಿಗಳು ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.

ಲೂಧಿಯಾನದಲ್ಲಿ ಜೂನ್ 10 ರಂದು ನಡೆದ 8 ಕೋಟಿ 49 ಲಕ್ಷ ರೂಪಾಯಿ ದರೋಡೆಗೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. 'ಡಾಕು ಹಸೀನಾ' ಎಂದು ಕರೆಯಲ್ಪಡುವ ಮಂದೀಪ್ ಕೌರ್ - ಜಸ್ವಿಂದರ್ ಸಿಂಗ್ ದಂಪತಿ ಬಂಧಿತರು.

ದರೋಡೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಮಂದೀಪ್ ಕೌರ್ ಮತ್ತು ಜಸ್ವಿಂದರ್ ಸಿಂಗ್ ಹರಕೆ ತೀರಿಸಲು ಸಿಖ್ ದೇಗುಲಕ್ಕೆ ತೆರಳುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಸಂಗ್ರಹಿಸಿದ್ದ ಪೊಲೀಸರು, ಉತ್ತರಾಖಂಡದ ಚಮೋಲಿಯ ಹೇಮಕುಂಡ್ ಸಾಹಿಬ್‌ ಎಂಬಲ್ಲಿ ರೆಡ್​ಹ್ಯಾಂಡ್​ ಆಗಿ ಬಂಧಿಸಿದ್ದಾರೆ.

ಏನಿದು ಪ್ರಕರಣ?

ಪಂಜಾಬ್​ನ ಲೂಧಿಯಾನದಲ್ಲಿ ಜೂನ್ 10ರಂದು ಬ್ಯಾಂಕ್‌ಗಳಿಗೆ ಹಣ ಸರಬರಾಜು ಮಾಡುವ ಸಂಸ್ಥೆ(ಸಿಎಂಎಸ್‌)ಯಲ್ಲಿ ಸಿಬ್ಬಂದಿಯನ್ನು ಕಟ್ಟಿ ಹಾಕಿ 8 ಕೋಟಿ ರೂ. ದರೋಡೆ ಮಾಡಿಕೊಂಡು ದಂಪತಿ ಪರಾರಿಯಾಗಿದ್ದರು. ಈ ಬಗ್ಗೆ ಪೊಲೀಸರು ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಸಿಸಿಟಿವಿ ದೃಶ್ಯವಾವಳಿ ಸೇರಿದಂತೆ, ಕೆಲ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು.

ಆರೋಪಿಗಳ ಪತ್ತೆಗೆ ಉಚಿತ ಪಾನೀಯ ವ್ಯವಸ್ಥೆ!

ದರೋಡೆಯ ಕಿಂಗ್​ಪಿನ್​ಗಳಾದ ಮಂದೀಪ್ ಕೌರ್ ಮತ್ತು ಜಸ್ವಿಂದರ್ ಸಿಂಗ್ ನೇಪಾಳಕ್ಕೆ ತೆರಳಿ ತಲೆಮರೆಸಿಕೊಳ್ಳಲು ಯೋಜನೆ ರೂಪಿಸಿಕೊಂಡಿದ್ದ ಬಗ್ಗೆ ಪಂಜಾಬ್ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಅದಕ್ಕೂ ಮೊದಲು ಅವರು ಹರಿದ್ವಾರ, ಕೇದಾರನಾಥ ಮತ್ತು ಹೇಮಕುಂಡ್​ ಸಾಹಿಬ್ ಸೇರಿದಂತೆ ವಿವಿಧ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಲು ಮುಂದಾಗಿದ್ದರು. ಹೀಗಾಗಿ ಆರೋಪಿಗಳ ಚಲನವಲನ ಗಮನಿಸುತ್ತಿದ್ದ ಪೊಲೀಸರು, ಉತ್ತರಾಖಂಡದ ಸಿಖ್ ದೇಗುಲಕ್ಕೆ ಭೇಟಿ ನೀಡಿದ್ದಾರೆ.

ಅಪಾರ ಸಂಖ್ಯೆಯಲ್ಲಿದ್ದ ಭಕ್ತರ ನಡುವೆ ದರೋಡೆಕೋರರನ್ನು ಪತ್ತೆ ಮಾಡಿ ಬಂಧಿಸುವುದು ಸವಾಲಿನ ಕೆಲಸವಾಗುತ್ತು. ಕೊನೆಗೆ ಉಪಾಯ ಹೂಡಿದ ಪೊಲೀಸರು ಯಾತ್ರಾರ್ಥಿಗಳಿಗೆ ಉಚಿತ ಪಾನೀಯ ವ್ಯವಸ್ಥೆ ಮಾಡಿ, ಆರೋಪಿಗಳು ಪಾನೀಯ ವಿತರಿಸುತ್ತಿದ್ದ ಸ್ಟಾಲ್ ಬಳಿ ಬರುವಂತೆ ಮಾಡಿದ್ದಾರೆ. ಆರೋಪಿ ದಂಪತಿ ತಮ್ಮನ್ನು ಯಾರೂ ಗುರುತು ಹಿಡಿಯಬಾರದೆಂದು ಮುಖ ಮುಚ್ಚಿಕೊಂಡಿದ್ದರು. ಆದರೂ ಪೊಲೀಸರು ಅವರನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಹೇಮಕುಂಡ್ ಸಾಹಿಬ್‌ನಲ್ಲಿ ನಮನ ಸಲ್ಲಿಸುತ್ತಿದ್ದಂತೆ ಕಿಂಗ್ ಪಿನ್ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ದಂಪತಿ ಬಳಿಯಿಂದ 21 ಲಕ್ಷ ರೂ.ಗಳನ್ನು ಸ್ಥಳದಲ್ಲಿ ವಶಪಡಿಸಿಕೊಂಡ ಪೊಲೀಸರು, ನಂತರ ಲೂಧಿಯಾನಕ್ಕೆ ಕರೆತಂದು ವಿಚಾರಣೆಗೆ ಒಳಪಡಿಸಿದ್ದಾರೆ. ಈವರೆಗೂ ಲೂಟಿ ಮಾಡಲಾಗಿದ್ದ 6 ಕೋಟಿ ರೂ. ಹಣ ವಶಕ್ಕೆ ಪಡೆಯಲಾಗಿದೆ. ಘಟನೆ ನಡೆದ ಐದು ದಿನದಲ್ಲೇ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಲೂಧಿಯಾನ ಪೊಲೀಸ್‌ ಆಯುಕ್ತ ಸಿಧು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net