

BiggBoss19 : ಇನ್ನೇನು ಕೆಲವೇ ದಿನಗಳಲ್ಲಿ ಸಲ್ಮಾನ್ ಖಾನ್ ನಿರೂಪಣೆಯ ಹಿಂದಿ ಬಿಗ್ಬಾಸ್ ಸೀಸನ್ 19 ತೆರೆ ಮೇಲೆ ಬರಲು ಸಜ್ಜಾಗಿದೆ. ಇನ್ನೂ ಈ ಬಾರಿಯ ಬಿಗ್ಬಾಸ್ ಕಾರ್ಯಕ್ರಮಕ್ಕೆ ಹಲವಾರು ನಾಯಕ, ನಾಯಕಿಯರ ಹೆಸರು ಕೇಳಿ ಬಂದಿದೆ. ಅದರಲ್ಲಿ ಜೈ ಹೋ ಮತ್ತು ರೇಸ್ 3 ಚಿತ್ರಗಳಲ್ಲಿ ನಟಿಸಿದ್ದ ನಟಿ ಡೈಸಿ ಅವರ ಹೆಸರು ಕೂಡ ಸಾಕಷ್ಟು ಚರ್ಚೆಯಲ್ಲಿತ್ತು. ಇದೀಗ ಈ ಬಗ್ಗೆ ಸ್ವತಃ ನಟಿ ಡೈಸಿ ಅವರೇ ಮಾತನಾಡಿದ್ದು, ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ವಿವಾದಾತ್ಮಕ ರಿಯಾಲಿಟಿ ಶೋ ಬಗ್ಗೆ ಊಹಾಪೋಹಗಳು ಎಲ್ಲೆಡೆ ಸೃಷ್ಟಿಯಾಗಿದ್ದು, ಸೀಸನ್ 19ರಲ್ಲಿ ಹಲವಾರು ನಟ ನಟಿಯರು ಭಾಗವಹಿಸುತ್ತಾರೆ ಎಂದು ಸುದ್ದಿಯಾಗುತ್ತಿದೆ.
ನಟಿ ಡೈಸಿ ಹೇಳಿದ್ದೇನು?
ಈ ಊಹಾಪೋಹಗಳಿಗೆ ನಟಿ ಡೈಸಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ನಿನ್ನೆ (ಜುಲೈ16)ಪ್ರತಿಕ್ರಿಯಿಸಿದ್ದು, ಎಲ್ಲಾ ವದಂತಿಗಳನ್ನು ತಳ್ಳಿಹಾಕುತ್ತಿದ್ದೇನೆ, ನಾನು ಬಿಗ್ಬಾಸ್ನಲ್ಲಿ ಸ್ಪರ್ಧಿಸುತ್ತಿಲ್ಲ, ಬಹುಶಃ ಇನ್ನೆಂದಿಗೂ ನಾನು ಸ್ಪರ್ಧೆ ಮಾಡುವುದಿಲ್ಲ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಇನ್ನೂ ಹಿಂದಿ ಬಿಗ್ಬಾಸ್ ಕಾರ್ಯಕ್ರಮ ಸೆಪ್ಟೆಂಬರ್ ಅಥವಾ ಅಕ್ಟೋಬರ್ನಲ್ಲಿ ಪ್ರಾರಂಭವಾಗಬೇಕಿತ್ತು. ಆದರೆ ಈ ಬಾರಿ ಜುಲೈನಲ್ಲೇ ಪ್ರಾರಂಭವಾಗಿ ಮುಂದಿನ ಜನವರಿಯಲ್ಲಿ ಅಂತ್ಯ ಕಾಣುವ ಸಾಧ್ಯತೆ ಇದೆ. ಸರಿ ಸುಮಾರು 6 ತಿಂಗಳುಗಳ ಕಾಲ ನಡೆಯುವಂತಹ ಶೋ ಇದಾಗಿದೆ.
ಇನ್ನೂ ಈ ಬಾರಿಯ ಬಿಗ್ಬಾಸ್ನಲ್ಲಿ ಲತಾ ಸಬರ್ವಾಲ್, ಅಪೂರ್ವ ಮುಖಿಜಾ, ಪುರವ್ ಝಾ, ನೀಲ್ ಮೋಟ್ವಾನಿ, ಅರ್ಹಾನ್ ಅನ್ಸಾರಿ, ಶಶಾಂಕ್ ವ್ಯಾಸ್, ಖುಷಿ ದುಬೆ, ಶರದ್ ಮಲ್ಹೋತ್ರಾ, ಮೂನ್ ಬ್ಯಾನರ್ಜಿ, ರಾಮ್ ಕಪೂರ್ ಮತ್ತು ಗೌತಮಿ ಕಪೂರ್ ಸೇರಿದಂತೆ ಮುಂತಾದವರ ಹೆಸರು ಕೇಳಿಬರುತ್ತಿದೆ.
(ಏಜೆನ್ಸೀಸ್)