

ತಿ.ನರಸೀಪುರ : ರೈತ ಕುಟುಂಬಗಳು ಸ್ವಾವಲಂಬನೆ ಬದುಕು ನಡೆಸಲು ಹೈನುಗಾರಿಕೆ ಪೂರಕ ಯೋಜನೆಯಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಬುಧವಾರ ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ(ಮೈಮುಲ್)ದ ತಿ.ನರಸೀಪುರ ಉಪ ಕಚೇರಿಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಜನರ ಆರ್ಥಿಕತೆಯನ್ನು ಸುಧಾರಣೆ ಮಾಡುವುದು ಹೈನುಗಾರಿಕೆಯ ಉದ್ದೇಶ. ಹೈನುಗಾರಿಕೆಯಲ್ಲಿ ತೊಡಗಿಕೊಂಡರೆ ಕುಟುಂಬದ ವಾರ್ಷಿಕ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ರಾಜ್ಯ ಸರ್ಕಾರ ಹೈನುಗಾರಿಕೆಗೆ 1600 ಕೋಟಿ ರೂ. ಅನುದಾನ ನೀಡಿದೆ. ಎಸ್‌ಸಿ, ಎಸ್‌ಟಿ ಸಮುದಾಯ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಪಡೆಯಲು ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಕೊಟ್ಟಿಗೆಯಲ್ಲಿ ಹಸುಗಳನ್ನು ಕಟ್ಟದವರು, ಸಗಣಿಯನ್ನು ಬಾಚಿ ಹೂತ್ತು ಸುರಿಯದವರು ಗೋ ಸಂರಕ್ಷಣೆಯ ಹೆಸರಿನಲ್ಲಿ ನಾಟಕವಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಳ್ಳಿಯಿಂದ ಪಟ್ಟಣಕ್ಕೆ ಉದ್ಯೋಗವನ್ನರಸಿ ವಲಸೆ ಹೋಗುವ ಬದಲು ಹೈನುಗಾರಿಕೆನ್ನ ಆರಂಭಿಸಿ ಬದುಕನ್ನ ಹಸನು ಮಾಡಿಕೊಳ್ಳಬೇಕು. ಮುಂದಿನ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಖುದ್ದಾಗಿ ಕರೆತಂದು 100 ರಿಂದ 300 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಪೂಜೆ ಸಲ್ಲಿಸಿ, ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಪಶು ಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್ ಮಾತನಾಡಿ, ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ 27 ಕೋಟಿ ರೂ. ನಷ್ಟದಲ್ಲಿದೆ. ಅನವಶ್ಯಕ ಖರ್ಚಿಗೆ ಕಡಿವಾಣ ಹಾಕಬೇಕು. ಮುಂದಿನ ಜನವರಿ ತಿಂಗಳಲ್ಲಿ ಹಾಲು ಉತ್ಪಾದಕರಿಗೆ 5 ರೂ. ಪ್ರೋತ್ಸಾಹ ಧನ ನೀಡಲು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಒಕ್ಕೂಟದ ಆಡಳಿತ ಮಂಡಳಿ ರೈತರಿಗೆ ನಷ್ಟವಾಗದ ರೀತಿಯಲ್ಲಿ ಯಾವುದೇ ಕೆಲಸ ಮಾಡಬಾರದು. ಮುಂದಿನ ದಿನಗಳಲ್ಲಿ ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಮೈಸೂರು ಜಿಲ್ಲಾ ಸಹಕ್ಕಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಆರ್.ಚಲುವರಾಜು ಮಾತನಾಡಿ, ಪಶು ವೈದ್ಯಕೀಯ ಸೇವೆ, ಹೈನುಗಾರಿಕೆ ಉಪಕರಣಗಳನ್ನು ಒದಗಿಸಲು ಹಾಗೂ ಪೌಷ್ಟಿಕ ಪಶು ಆಹಾರವನ್ನು ಒದಗಿಸಲು ಪಟ್ಟಣದಲ್ಲಿ ಉಪಕಚೇರಿಯನ್ನು ನಿರ್ಮಾಣ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ನಂಜನಗೂಡಿನಲ್ಲಿರುವ ಎಪಿಎಂಸಿಯಲ್ಲಿ ಉಪಕಚೇರಿಯನ್ನು ತೆರೆಯಬೇಕೆಂಬ ಯೋಜನೆ ಇದೆ. ಮುಂದಿನ ವರ್ಷದಿಂದ ಹೈನುಗಾರರರಿಗೆ 5 ರೂ. ಪ್ರೋತ್ಸಾಹಧನ ನೀಡಲಾಗುವುದು. ನಿತ್ಯವೂ ಸಂಗ್ರಹಗೊಳ್ಳುವ 9 ಲಕ್ಷ ಲೀಟರ್ ಹಾಲಿನಲ್ಲಿ 4.50 ಲಕ್ಷ ಲೀ. ಹಾಲು ಮಾರಾಟವಾಗುತ್ತಿದೆ. ಉಳಿಕೆ ಹಾಲನ್ನು ಪೌಡರ್ ಆಗಿ ಪರಿವರ್ತಿಸಿ ಕೊಳ್ಳುತ್ತಿದ್ದೇವೆ. ಮುಂದೆ ಚಾಕಲೇಟ್ ಮತ್ತು ಪನ್ನೀರ್ ಕಾರ್ಖಾನೆ ತೆರೆಯುವ ಆಲೋಚನೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
ಹಾಲು ಒಕ್ಕೂಟದ ನಿರ್ದೇಶಕರಾದ ಸಿ.ಓಂಪ್ರಕಾಶ್, ಕೆ.ಜಿ. ಮಹೇಶ್, ಈರೇಗೌಡ, ಬಸವಣ್ಣ, ಕೆ.ಎಸ್.ಕುಮಾರ, ಉಮಾಶಂಕರ್, ಸದಾನಂದ, ಪ್ರಕಾಶ್, ಬಿ.ನೀಲಾಂಬಿಕಾ, ಶಿವಗಾಮಿನಿ, ಮಲ್ಲಿಕಾ, ಲೀಲಾನಾಗರಾಜು, ದಾಕ್ಷಾಯಿಣಿ, ಪುರಸಭಾ ಅಧ್ಯಕ್ಷೆ ಬಿ.ವಸಂತ ಶ್ರೀಕಂಠ, ಜಿ.ಪಂ. ಪ್ರಭಾರ ಮಾಜಿ ಅಧ್ಯಕ್ಷ ಎಸ್.ಎನ್.ಸಿದ್ದಾರ್ಥ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಕೆ.ವಜ್ರೇಗೌಡ, ಮೃಗಾಲಯ ಪ್ರಾಧಿಕಾರದ ಮಾಜಿ ನಿರ್ದೇಶಕ ಲತಾ ಜಗದೀಶ, ಬ್ಲಾಕ್ ಕಾಂಗ್ರೆಶ್ ಅಧ್ಯಕ್ಷರಾದ ಎಂ.ಡಿ ಬಸವರಾಜು, ಕೆ.ಮುದ್ದೇಗೌಡ, ಬಿ.ಚನ್ನಕೇಶವ, ಜಿ.ಪಂ ಮಾಜಿ ಸದಸ್ಯ ಹೊನ್ನಾನಾಯಕ, ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಸುರೇಶ ನಾಯಕ್, ಇಂಜಿನಿಯರ್ ಸಂದೇಶ, ಮಾರ್ಗ ವಿಸ್ತರಣಾಧಿಕಾರಿ ಆರ್.ಪ್ರಮೋದ, ಪಶು ಸಂಗೋಪನ ಇಲಾಖೆ ನಾಗರಾಜು, ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್, ಮುಖ್ಯಾಧಿಕಾರಿ ಬಿ.ಕೆ.ವಸಂತಕುಮಾರಿ, ಲಿಂಗರಾಜು, ಬಿ.ಮನ್ಸೂರ್ ಆಲಿ ಹಾಗೂ ಇತರರು ಇದ್ದರು.