

ಸರಗೂರು : ರೈತರ ಆರ್ಥಿಕ ಪ್ರಗತಿಗೆ ಹೈನುಗಾರಿಕೆ ಸಹಕಾರಿ ಎಂದು ಮೈಮುಲ್ ನಿರ್ದೇಶಕ ಈರೇಗೌಡ ಹೇಳಿದರು.ಕಂದಲಿಕೆ ಹೋಬಳಿ ಸಾಗರೆ ಗ್ರಾಪಂ ವ್ಯಾಪ್ತಿಯ ಕಂದೇಗಾಲ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು. 15 ದಿನಗಳಿಗೊಮ್ಮೆ ಗ್ರಾಹಕರ ಖಾತೆಗೆ ಮೈಮುಲ್‌ನಿಂದ ನೇರವಾಗಿ ಹಣ ಜಮಾ ಮಾಡುವ ವ್ಯವಸ್ಥೆ ಜಾರಿಯಲ್ಲಿದೆ. ರಾಸುಗಳಿಗೆ ಬೂಸಾದ ಬದಲು ಕೆಎಂಎಫ್‌ನಿಂದ ನೀಡುವ ಫೀಡ್ಸ್ ಬಳಸಿದರೆ ಹಾಲಿನ ಗುಣಮಟ್ಟ ಹೆಚ್ಚಾಗಲಿದೆ ಎಂದು ಅವರು ಸಲಹೆ ನೀಡಿದರು.
ಮಳೆಯನ್ನೇ ನಂಬಿಕೊಂಡು ವ್ಯವಸಾಯ ಮಾಡುವವರ ಪರಿಸ್ಥಿತಿ ಈ ವರ್ಷ ಕಷ್ಟಕರವಾಗಿದೆ. ಈ ಸಂದರ್ಭದಲ್ಲಿ ಹೈನುಗಾರಿಕೆ ವರವಾಗಿದೆ. ವ್ಯವಸ್ಥಿತವಾಗಿ ಹೈನುಗಾರಿಕೆ ಮಾಡಿದರೆ ಉತ್ತಮ ಆದಾಯ ಖಚಿತ ಎಂದರು. ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೆಂದೇಗಾಲ ಶಿವರಾಜು ಮಾತನಾಡಿ, ಸರ್ಕಾರವು ಹಾಲು ಉತ್ಪಾದಕರಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅದನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಸಹಕಾರಿ ಸಂಘಗಳಲ್ಲೇ ಕೃಷಿಕರು ಆರ್ಥಿಕ ವಹಿವಾಟು ಮಾಡಿ ಸಾಲ ಸೌಲಭ್ಯ ಪಡೆದುಕೊಳ್ಳಬೇಕು. ಖಾಸಗಿ ಬ್ಯಾಂಕ್‌ಗಳ ಆಮಿಷಕ್ಕೆ ಒಳಗಾಗಬಾರದು ಎಂದು ಸಲಹೆ ನೀಡಿದರು. ಪುರಸಭೆ ಸದಸ್ಯರಾದ ನರಸಿಂಹಮೂರ್ತಿ, ಪ್ರೇಮಸಾಗರ್, ಹೆಗ್ಗನೂರು ಗ್ರಾಪಂ ಅಧ್ಯಕ್ಷ ಸುಧೀರ್, ನಾಯಕ ಸಮಾಜದ ತಾಲೂಕು ಅಧ್ಯಕ್ಷ ಪುರದಕಟ್ಟೆ ಬಸವರಾಜು, ಜಿಪಂ ಮಜಿ ಸದಸ್ಯ ಟಿ ರವಿ, ಮುಖಂಡ ಭಾಸ್ಕರ್ ಇತರರು ಇದ್ದರು.