

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಆಡಿದ ಒಂದು ಮಾತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಕಾನೂನು ಸಂಕಷ್ಟಕ್ಕೆ ಸಿಲುಕಿಸಿದೆ. 2019ರ ಲೋಕಸಭೆ ಚುನಾವಣೆ ವೇಳೆ ಕರ್ನಾಟಕದ ಕೋಲಾರದಲ್ಲಿ ಭಾಷಣ ಮಾಡಿದ್ದ ರಾಹುಲ್, ‘ಹಾಲಿ ಕೇಂದ್ರ ಸರ್ಕಾರ ವಂಚಕ ಉದ್ಯಮಿಗಳಿಗೆ ಕೆಂಪು ಹಾಸು ಹಾಕುತ್ತಿದೆ. ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ ಎಲ್ಲರೂ ದೇಶಕ್ಕೆ ವಂಚನೆ ಮಾಡುತ್ತಿದ್ದಾರೆ. ನೋಡಿ, ಎಲ್ಲ ಕಳ್ಳರಿಗೆ ಮೋದಿ ಎಂಬ ಸಾಮಾನ್ಯ ಉಪನಾಮ ಹೇಗೆ ಬರುತ್ತದೆ’ ಎಂದಿದ್ದರು.
ಗುಜರಾತ್ನ ಬಿಜೆಪಿ ಶಾಸಕ ಪೂರ್ಣೆಶ್ ಮೋದಿ ರಾಹುಲ್ ಹೇಳಿಕೆ ವಿರುದ್ಧ ಕೋರ್ಟ್ ಮೆಟ್ಟಿಲೇರಿ, ಕಾಂಗ್ರೆಸ್ ನಾಯಕ ಇಡೀ ಮೋದಿ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂದು ಮೊಕದ್ದಮೆ ಹೂಡಿದರು. ಆ ಪ್ರಕರಣದ ತೀರ್ಪು ಈಗ ಹೊರಬಂದಿದ್ದು, ರಾಹುಲ್ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ತೀರ್ಪು ಪ್ರಶ್ನಿಸಿ ಮೇಲ್ಮನವಿ ಹೋಗಲು ಅವಕಾಶವಿದ್ದು, ಅವರ ಸಂಸದ ಸ್ಥಾನ ರದ್ದಾಗುತ್ತದೆಯೇ ಎಂಬ ಕುತೂಹಲವೂ ಮೂಡಿದೆ. ಮೇಲಿನ ಹಂತದ ನ್ಯಾಯಾಲಯಗಳಲ್ಲಿ ಈ ಪ್ರಕರಣದ ತೀರ್ಪು ಯಾವ ರೀತಿ ಬರಬಹುದೆಂಬುದು ಬೇರೆ ವಿಚಾರ. ಆದರೆ ಸಾರ್ವಜನಿಕ ಜೀವನದಲ್ಲಿರುವವರು ಬಹಿರಂಗ ಸಭೆಗಳಲ್ಲಿ ಭಾಷಣ ಮಾಡುವಾಗ, ಚುನಾವಣಾ ಪ್ರಚಾರದಲ್ಲಿ ಎದುರಾಳಿಗಳನ್ನು ಗುರಿಮಾಡುವಾಗ ಬಹಳ ಎಚ್ಚರಿಕೆ ವಹಿಸಬೇಕು ಎಂಬ ಸಂದೇಶವಂತೂ ಇಲ್ಲಿದೆ.
ಸಂವಿಧಾನದ 19ನೇ ಪರಿಚ್ಛೇದವು ಭಾರತದ ಎಲ್ಲ ನಾಗರಿಕರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ. ಈ ವಿಷಯದಲ್ಲಿ ಜನಪ್ರತಿನಿಧಿಗಳು-ಜನಸಾಮಾನ್ಯರು ಎಂಬ ಭೇದವಿಲ್ಲ. ಆದರೆ ನಮ್ಮ ಸಂವಿಧಾನ ಹಕ್ಕಿನ ಜತೆಜತೆಗೇ ಕರ್ತವ್ಯಗಳನ್ನೂ ನಿಗದಿಪಡಿಸಿದೆ. ಹಕ್ಕುಗಳನ್ನು ಬಳಸುವಾಗ ಕರ್ತವ್ಯದ ಎಚ್ಚರಿಕೆ ಕೂಡಾ ಇರಬೇಕಾಗುತ್ತದೆ. ಇನ್ನೊಬ್ಬರ ಬಗ್ಗೆ ಆಧಾರವಿಲ್ಲದೆ ಆರೋಪ ಮಾಡುವುದು, ಸಮುದಾಯದ ಅವಹೇಳನ ಮಾಡುವುದು, ಕೋಮು ಉದ್ವಿಗ್ನತೆ ಸೃಷ್ಟಿಯಾಗುವ ರೀತಿಯಲ್ಲಿ ಪ್ರಚೋದನಕಾರಿಯಾಗಿ ಮಾತಾಡುವುದು ಇವೆಲ್ಲ ಅಪೇಕ್ಷಣೀಯವಲ್ಲ. ಇಂಥ ಸಂದರ್ಭದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವ ಅವಕಾಶವನ್ನು ಸಂವಿಧಾನವೇ ಕಲ್ಪಿಸಿದೆ.
ವಿಶೇಷವಾಗಿ ಸಾರ್ವಜನಿಕ ಜೀವನದಲ್ಲಿರುವವರು ಇದನ್ನು ಗಮನಿಸಬೇಕಿದೆ. ಅದರಲ್ಲೂ ಚುನಾವಣೆ ಸಮಯದಲ್ಲಿ ನಾಯಕರ ಮಾತಿಗೆ ಕಡಿವಾಣವೇ ಇರುವುದಿಲ್ಲ. ಎಷ್ಟೋ ಮಂದಿ ಮಾತಿನಿಂದ ಮತಗಳನ್ನು ಕಳೆದುಕೊಂಡಿದ್ದೂ ಇದೆ. ರಾಜಕಾರಣದಲ್ಲಿ ಎದುರಾಳಿಗಳ ಬಗ್ಗೆ ಆರೋಪ-ಪ್ರತ್ಯಾರೋಪ, ಟೀಕೆ, ವ್ಯಂಗ್ಯ ಮಾತು ಇವೆಲ್ಲ ಒಂದು ಹಂತಕ್ಕೆ ಸಹ್ಯ. ಆದರೆ ಮಿತಿ ಮೀರಿದರೆ ವಾತಾವರಣ ಹದಗೆಡುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಮಾತು ಮಸಾಲೆ ಸೇರಿಸಿಕೊಂಡು ಬಹುಬೇಗ ಪಸರಿಸುವ ಕಾಲ ಇದು. ಕರ್ನಾಟಕದಲ್ಲಿ ಈಗ ವಿಧಾನಸಭಾ ಚುನಾವಣೆಯ ಪ್ರಚಾರದ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಈಗಾಗಲೇ ಮಾತಿನ ಸಮರವೂ ಜೋರಾಗಿದೆ. ಮಾತಿನ ಅರ್ಥ ಮತ್ತು ಅನರ್ಥದ ಅರಿವು ನಾಯಕರಿಗೆ ಇರಲಿ ಎಂಬುದು ಜನರ ಆಶಯ ಮತ್ತು ಅಪೇಕ್ಷೆ.