ಸಂಪಾದಕೀಯ | ಭಾರತದ ಹಿತಾಸಕ್ತಿಗೆ ಬಳಕೆ

Modi (8)
Published on

ಭಾರತ-ಅಮೆರಿಕ ಸಂಬಂಧವು 21ನೇ ಶತಮಾನದಲ್ಲಿ ಅತ್ಯಂತ ವ್ಯಾಖ್ಯಾನಿಸುವ ಸಂಬಂಧಗಳಲ್ಲಿ ಒಂದಾಗಿದೆ. ಹೀಗಂತ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರೇ ಬಹಿರಂಗವಾಗಿ ಸಾರಿದ್ದಾರೆ. ಭಾರತವನ್ನು ಗೌರವಪೂರ್ವಕವಾಗಿ ಕಾಣುವ ಈ ಹೇಳಿಕೆಯನ್ನು ಅಮೆರಿಕ ಅಧ್ಯಕ್ಷರು ಕೇವಲ ತೋರಿಕೆಯ ಔಪಚಾರಿಕತೆಗಾಗಿ ಹೇಳಿದ್ದಾರೆ ಎನ್ನಲಾಗದು. ಅಮೆರಿಕಕ್ಕೆ ಅಧಿಕೃತವಾಗಿ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೊರೆತಿರುವ ಆದರದ ಸ್ವಾಗತ, ಮನ್ನಣೆ ನೋಡಿದರೆ ಅಮೆರಿಕವು ಭಾರತದ ಜತೆ ಗಾಢವಾದ ಸಂಬಂಧ ಬಯಸುತ್ತಿದೆ ಎಂಬುದು ಗೋಚರಿಸುತ್ತದೆ. ಈ ಹಿಂದೆ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮೋದಿ ಅವರಿಗೆ ಅಮೆರಿಕ ಪ್ರವಾಸ ಕೈಗೊಳ್ಳಲು ವೀಸಾ ನಿರಾಕರಿಸಲಾಗಿತ್ತು ಎಂಬುದು ಗಮನಾರ್ಹ.

ಅಮೆರಿಕದ ಮೈಕ್ರಾನ್ ಕಂಪನಿಯು ಭಾರತದಲ್ಲಿ ಚಿಪ್ ಪರೀಕ್ಷಾ ಹಾಗೂ ಪ್ಯಾಕೇಜಿಂಗ್ ಘಟಕ ಸ್ಥಾಪಿಸಲು ಈಗ ಮುಂದಾಗಿದೆ. ಚಿಪ್ ತಂತ್ರಜ್ಞಾನ ತಯಾರಿಕೆ ಮೂಲಕ ಎಲೆಕ್ಟ್ರಾನಿಕ್ಸ್ ವಸ್ತುಗಳ ಜಾಗತಿಕ ಉತ್ಪಾದಕನಾಗುವ ಭಾರತದ ಮಹತ್ವಾಕಾಂಕ್ಷೆಯ ಮುನ್ನಡೆಯಲ್ಲಿ ಇದೊಂದು ಪ್ರಮುಖ ಹೆಜ್ಜೆಯಾಗಿದೆ. ತನ್ನ ಚಿಪ್ ತಂತ್ರಜ್ಞಾನವನ್ನು ಯುದ್ಧ ಸಾಧನಗಳ ತಯಾರಿಕೆಗೆ ಬಳಸಿಕೊಳ್ಳುತ್ತಿದೆ ಎಂಬ ಕಾರಣಕ್ಕಾಗಿ ಚೀನಾದ ಮೇಲೆ ಈ ತಂತ್ರಜ್ಞಾನದ ನಿರ್ಬಂಧವನ್ನು ಅಮೆರಿಕವು ಹೇರಿದೆ. ಇದೇ ವೇಳೆ, ಬೆರಳೆಣಿಕೆಯಷ್ಟು ದೇಶಗಳ ಬಳಿ ಇರುವ ಜೆಟ್ ಇಂಜಿನ್ ತಂತ್ರಜ್ಞಾನವೂ ಭಾರತಕ್ಕೆ ಲಭಿಸುವ ನಿಟ್ಟಿನಲ್ಲಿ ಅಮೆರಿಕದ ಜನರಲ್ ಇಲೆಕ್ಟ್ರಿಕ್ ಹಾಗೂ ಭಾರತದ ಎಚ್​ಎಎಲ್ ನಡುವೆ ಒಪ್ಪಂದ ಏರ್ಪಟ್ಟಿದೆ.

ಯುದ್ಧ ಸಾಮಗ್ರಿ ತಯಾರಿಕೆಗಾಗಿ ಬಳಸಿಕೊಳ್ಳುತ್ತಿದೆ ಎಂದು ಚೀನಾಕ್ಕೆ ಚಿಪ್ ತಂತ್ರಜ್ಞಾನ ನಿರಾಕರಿಸುತ್ತಿರುವ ಅಮೆರಿಕವೇ, ಭಾರತದ ಲಘು ಯುದ್ಧ ವಿಮಾನ ತೇಜಸ್​ಗಾಗಿ ಜೆಟ್ ಇಂಜಿನ್ ತಂತ್ರಜ್ಞಾನ ಒದಗಿಸುತ್ತಿರುವುದು ಮೋದಿ ಸರ್ಕಾರದ ರಾಜತಾಂತ್ರಿಕ ಜಯ ಎಂದೇ ಪರಿಗಣಿಸಬಹುದಾಗಿದೆ. ವ್ಯಾಪಾರ ಹಾಗೂ ಶಸ್ತ್ರಾಸ್ತ್ರ ಮಾರಾಟ ವಿಷಯಗಳಲ್ಲಿ ಉಭಯ ದೇಶಗಳ ನಡುವೆ ಸಹಕಾರ ಇತ್ತೀಚಿನ ದಿನಗಳಲ್ಲಿ ಅಧಿಕವಾಗುತ್ತಿದೆ. ಬೆಂಗಳೂರು ಮತ್ತು ಅಹಮದಾಬಾದ್​ನಲ್ಲಿ ಅಮೆರಿಕ ಹಾಗೂ ಸಿಯಾಟಲ್ ಸೇರಿದಂತೆ ಎರಡು ನಗರಗಳಲ್ಲಿ ಭಾರತ ರಾಯಭಾರ ಕಚೇರಿ ಆರಂಭಿಸುತ್ತಿರುವುದು ಕೂಡ ಮಹತ್ವದ ಹೆಜ್ಜೆಯಾಗಿದೆ.

ಪ್ರವಾಸಿ, ಉದ್ಯೋಗ ಮತ್ತು ವಿದ್ಯಾರ್ಥಿ ವೀಸಾಗಳ ಹಲವು ನಿರ್ಬಂಧ ಸಡಿಲಿಸುತ್ತಿರುವುದು, ತಾತ್ಕಾಲಿಕ ವಾಸದ ಅನುಮತಿ ನವೀಕರಿಸುವ ಕುರಿತ ಚಿಂತನೆಗಳು ದೂರಗಾಮಿ ಪರಿಣಾಮ ಬೀರಲಿವೆ. ಇಂಡೋ- ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಬೆಳವಣಿಗೆ ನಿಯಂತ್ರಿಸಲು ಭಾರತದ ಅವಶ್ಯಕತೆ ಅಮೆರಿಕಕ್ಕೆ ಇದೆ ಎಂದೇ ವಿಶ್ಲೇಷಿಸಲಾಗಿದೆ. ಹೀಗಾಗಿಯೇ ಅಮೆರಿಕ ನೇತೃತ್ವದ ನ್ಯಾಟೋ ಮೈತ್ರಿಕೂಟ ಸೇರುವಂತೆ ಭಾರತಕ್ಕೆ ಈಗಾಗಲೇ ಆಹ್ವಾನ ನೀಡಲಾಗಿದೆ. ಇಂತಹ ಸಂದರ್ಭವನ್ನು ಭಾರತದ ಬೆಳವಣಿಗೆಯ ಹಿತಾಸಕ್ತಿಗಾಗಿ ಬಳಸಿಕೊಳ್ಳುವ ಜಾಣ್ಮೆಯನ್ನು ಮೋದಿ ಪ್ರದರ್ಶಿಸುತ್ತಿರುವುದು ಗೋಚರಿಸುತ್ತದೆ. ಎಲೆಕ್ಟ್ರಾನಿಕ್, ಆಟೋಮೊಬೈಲ್, ರಕ್ಷಣಾ ಸಾಮಗ್ರಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಚೀನಾವನ್ನು ಮೀರಿಸುವಂತೆ ಭಾರತವನ್ನು ಜಾಗತಿಕ ಉತ್ಪಾದಕನಾಗಿ ಮಾಡುವ ಮೂಲಕ ಆರ್ಥಿಕ ಶಕ್ತಿಯಾಗಿ ಬೆಳೆಸುವ ನಿಟ್ಟಿನಲ್ಲಿ ಮೋದಿ ಅವರ ಕ್ರಮಗಳು ಈಗಾಗಲೇ ಸಾಕಷ್ಟು ಫಲ ನೀಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net