ಮಗಳ ಮೇಲೆಯೇ ಅತ್ಯಾಚಾರ ಎಸಗಿದ ತಂದೆ: ಮಗಳನ್ನೇ ಬ್ಲ್ಯಾಕ್​ಮೇಲ್ ಮಾಡಿದ್ದ ಕಿರಾತಕ!| ಬಾಯ್​ ಫ್ರೆಂಡ್ ವಿರುದ್ಧವೂ ಪ್ರಕರಣ ದಾಖಲು

Rape vvani
Published on

ಮುಂಬೈ: ಹದಿಹರೆಯದ ಮಗಳ ಮೇಲೆ ಅತ್ಯಾಚಾರ ಎಸಗಲು ಬ್ಲ್ಯಾಕ್​ಮೇಲ್​ ಮಾಡಿದ್ದ ತಂದೆಯೊಬ್ಬ ಈಗ ಪೊಲೀಸರ ಅತಿಥಿ. ತಾಯಿ ಕೊಟ್ಟ ದೂರು ಮತ್ತು ನಂತರದ ವಿಚಾರಣೆ ವೇಳೆ ಬಹಿರಂಗವಾದ ಕಥೆ ನಿಜಕ್ಕೂ ವ್ಯಥೆ ಮೂಡಿಸುವಂಥದ್ದು.

ಬಂಧಿತ ವ್ಯಕ್ತಿಗೆ 40 ವರ್ಷ ವಯಸ್ಸು. ಖಾಸಗಿ ಕಂಪನಿಯ ಉದ್ಯೋಗಿ. ಮಗಳ ವಯಸ್ಸು 17. ಹೀಗಾಗಿ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ಕೋರ್ಟ್​ ಜಾಮೀನು ನಿರಾಕರಿಸಿದೆ. ಈ ಪ್ರಕರಣದಲ್ಲಿ ಮಗಳ ಬಾಯ್​ ಫ್ರೆಂಡ್​ ವಿರುದ್ಧವೂ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಆತನಿಗೆ ನಿರೀಕ್ಷಣಾ ಜಾಮೀನು ಸಿಕ್ಕಿದೆ.

ಪ್ರಕರಣ ಬೆಳಕಿಗೆ ಬಂದ ಬಗೆ: ನವೆಂಬರ್ ತಿಂಗಳಲ್ಲಿ ಮಗಳ ಫೋನಿನಲ್ಲಿ ಮಗಳದ್ದೇ ಹಲವು ಬೆತ್ತಲೆ ವಿಡಿಯೋ, ಫೋಟೊಗಳು ಇರುವುದನ್ನು ತಾಯಿ ಗಮನಿಸಿದ್ದರು. ಸ್ವಲ್ಪ ವಿಚಾರಣೆ ಬಳಿಕ ಈ ವಿಡಿಯೋ, ಫೋಟೊಗಳನ್ನು ಚಿತ್ತೀಕರಿಸಿದ್ದು ಪತಿಯೇ ಎಂಬುದು ಅರಿವಾಗಿ ನಖಶಿಖಾಂತ ಸಿಟ್ಟಿಗೆದ್ದು ಬಿಟ್ಟರು. ಮಗಳನ್ನು ಮತ್ತಷ್ಟು ವಿಚಾರಿಸಿದಾಗ ಬೆಳಕಿಗೆ ಬಂದ ವಿಷಯದಿಂದ ಬೆಚ್ಚಿಬಿದ್ದರು ತಾಯಿ. ಕೂಡಲೇ ಪೊಲೀಸರಿಗೆ ದೂರು ನೀಡಿದ್ದು, ಅವರು ಈ ಮಗಳ ಹೇಳಿಕೆಯನ್ನು ದಾಖಲಿಸಿದರು.

ಪೊಲೀಸರಿಗೆ ಆ ಬಾಲಕಿ ಹೇಳಿದ್ದಿಷ್ಟು: 2019ರ ಜುಲೈ 15ರಂದು ನನ್ನ ಬಾಯ್ ಫ್ರೆಂಡ್ ಕಾಲೇಜು ಪ್ರಾಜೆಕ್ಟ್​ಗೆ ನೆರವು ಕೋರಿ ಮನೆಗೆ ಬಂದಿದ್ದ. ಆ ಸಂದರ್ಭದಲ್ಲಿ ಮನೆಯಲ್ಲಿ ಪಾಲಕರೂ ಇದ್ದರು. ಇಬ್ಬರೂ ಪ್ರಾಜೆಕ್ಟ್ ಮಾಡುತ್ತಿದ್ದಾಗ, ನನ್ನ ಬಾಯ್​ ಫ್ರೆಂಡ್ ಎಲ್ಲರಿಗೂ ಫುಡ್ ಆರ್ಡರ್ ಮಾಡಿದ. ನನಗೆ ಸ್ವಲ್ಪ ಅನಾರೋಗ್ಯ ಇದ್ದ ಕಾರಣ ನಾನು ಆಮೇಲೆ ತಿನ್ನುತ್ತೇನೆ ಎಂದಿದ್ದೆ. ಆದರೆ, ಸ್ವಲ್ಪ ಹೊತ್ತು ಬಿಟ್ಟು ತಿನ್ನುವುದಕ್ಕೆ ಕುಳಿತರೆ ಅಲ್ಲೇನೂ ಇರಲಿಲ್ಲ. ಇದರಿಂದ ಸಿಟ್ಟಿಗೆದ್ದು ನಾನು ನನ್ನ ರೂಮಿಗೆ ಹೋದೆ.

ಕೂಡಲೇ ಅಲ್ಲಿಗೆ ಬಾಯ್ ಫ್ರೆಂಡ್ ಓಡಿ ಬಂದ. ನನ್ನನ್ನು ಸಮಾಧಾನಿಸಲು ಪ್ರಯತ್ನಿಸುತ್ತ ಶರೀರ ಸ್ಪರ್ಶ ಮಾಡಿದ. ನನ್ನ ಪ್ರತಿರೋಧದ ನಡುವೆಯೇ ಅಲ್ಲಿ ನಡೆಯಬಾರದ್ದು ನಡೆದು ಹೋಗಿದೆ. ಆದರೆ ಈ ವಿಷಯವನ್ನು ನಾನು ಯಾರ ಬಳಿಯೂ ಹೇಳಿರಲಿಲ್ಲ.

ಆದರೆ, ಮಾರನೇ ದಿನ ಮನೆಯಲ್ಲಿ ತಾಯಿ ಇಲ್ಲದ ಸಂದರ್ಭದಲ್ಲಿ ತಂದೆ ನನ್ನ ಸಮೀಪ ಬಂದರು. ಬಾಯ್ ಫ್ರೆಂಡ್ ಜತೆಗಿದ್ದಾಗಿನ ವಿಡಿಯೋವನ್ನು ಮೊಬೈಲ್​ನಲ್ಲಿ ತೋರಿಸಿ ನನ್ನ ಮೇಲೆ ಅತ್ಯಾಚಾರ ಎಸಗಿದರು. ಅಲ್ಲಿಂದೀಚೆಗೆ ಪದೇಪದೇ ಈ ರೀತಿ ಲೈಂಗಿಕ ದೌರ್ಜನ ನಡೆದಿದೆ. ಯಾರಿಗಾದರೂ ಹೇಳಿದರೆ ವಿಡಿಯೋ ವೈರಲ್ ಮಾಡುವುದಲ್ಲದೆ, ತಾಯಿಗೂ ವಿಚ್ಚೇಧನ ನೀಡುವುದಾಗಿ ಬೆದರಿಸುತ್ತಿದ್ದರು.

ಈ ಹೇಳಿಕೆ ಆಧರಿಸಿ, ತಂದೆಯನ್ನು ಪ್ರಥಮ ಆರೋಪಿಯನ್ನಾಗಿಯೂ, ಬಾಯ್​ಫ್ರೆಂಡನ್ನು ಸಹ ಆರೋಪಿಯನ್ನಾಗಿಯೂ ಮಾಡಿ ಪೊಲೀಸರು ಪ್ರಕರಣ ದಾಖಲಿಸಿದ್ದು, ವಿಚಾರಣೆ ಮುಂದುವರಿದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net