

ಬೆಂಗಳೂರು: ನಟ ಡಾಲಿ ಧನಂಜಯ ಸಮಾರಂಭವೊಂದರಲ್ಲಿ ‘ಬಡವ್ರ ಮಕ್ಳು ಬೆಳಿಬೇಕು ಕಣ್ರಯ್ಯ’ ಎಂದು ಹೇಳಿದ್ದ ಮಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈಗ ಅದೇ ಮಾತು ಹೊಸ ಚಿತ್ರಕ್ಕೆ ಸ್ಫೂರ್ತಿಯಾಗಿದೆ ಹಾಗೂ ಅದೇ ಚಿತ್ರದ ಶೀರ್ಷಿಕೆಯಾಗಿದೆ.
ಹೌದು, ಮಂಜುಕವಿ ನಿರ್ದೇಶನದ ಹೊಸ ಚಿತ್ರದ ಶೀರ್ಷಿಕೆ ‘ಬಡವ್ರ ಮಕ್ಳು ಬೆಳಿಬೇಕು ಕಣ್ರಯ್ಯ’. ಇತ್ತೀಚೆಗಷ್ಟೆ ರೇಣುಕಾಂಬ ಥಿಯೇಟರ್‌ನಲ್ಲಿ ಚಿತ್ರದ ಮುಹೂರ್ತ ನೆರವೇರಿದೆ. ಬೆಂಗಳೂರು ಪೂರ್ವ ವಲಯದ ಡಿಸಿಪಿ ದೇವರಾಜ್ ಆರಂಭ ಫಲಕ ತೋರಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಚಿತ್ರದ ಬಗ್ಗೆ ನಿರ್ದೇಶಕ ಮಂಜುಕವಿ, ‘ಡಾಲಿ ಹೇಳಿದ ಮಾತನ್ನು ಸ್ಫೂರ್ತಿಯಾಗಿಟ್ಟುಕೊಂಡು ಈ ಚಿತ್ರದ ಕಥೆ ಬರೆದಿದ್ದೇನೆ. ಬಡ ಕುಟುಂಬದಲ್ಲಿ ಹುಟ್ಟಿದ ಮಕ್ಕಳಲ್ಲಿ ಪ್ರತಿಭೆ ಇದ್ದರೂ, ಅವರಿಗೆ ಪ್ರೋತ್ಸಾಹ ಸಿಗುವುದು ಕಡಿಮೆ. ಬಳಿಕ ಅವರಲ್ಲಿರುವ ಪ್ರತಿಭೆ ನಶಿಸಿಹೋಗುತ್ತದೆ. ಆದರೆ, ಹಾಗಾಗಬಾರದು. ಪ್ರತಿಭಾನ್ವಿತ ಬಡ ಮಕ್ಕಳು ಬೆಳೆಯಬೇಕು ಎನ್ನುವುದೇ ಕಥಾಹಂದರ’ ಎಂದು ಮಾಹಿತಿ ಹಂಚಿಕೊಂಡರು. ಚಿತ್ರದ ಮುಖ್ಯ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ ಹಾಗೂ ಸಂಗೀತ ಅಭಿನಯಿಸುತ್ತಿದ್ದು, ರಾಜವರ್ಧನ್ ಹಾಗೂ ಲಾವಣ್ಯ ವೈಭವಿ ಮಕ್ಕಳ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಜತೆಗೆ ಫ್ರೆಂಡ್ಸ್ ವಾಸು, ಮೂಗೂರು ಸುರೇಶ್, ಚಂದ್ರಪ್ರಭ, ಚೈತ್ರಾ ಕೊಟ್ಟೂರು, ಮಂಜು ಪಾವಗಡ, ಚಿದಾನಂದ್, ಜಗದೀಶ್ ಕೊಪ್ಪ ಶಿವಾರೆಡ್ಡಿ ಸನತ್, ವಿನೋದ್ ಚಿತ್ರದ ಮುಖ್ಯ ತಾರಾಗಣದಲ್ಲಿದ್ದಾರೆ. ನಿರ್ದೇಶನದ ಜತೆ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ಮಂಜುಕವಿ ಹೊತ್ತಿದ್ದಾರೆ. ಉಳಿದಂತೆ ರಏಣುಕುಮಾರ್ ಛಾಯಾಹಗ್ರಹಣ, ವೆಂಕಿ ಸಂಕಲನ, ವಿನು ಮನಸು ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ.