'40% ಕಮಿಷನ್' ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಇನ್ನಿಲ್ಲ

ವಿಜಯವಾಣಿ - 2024-09-19T135152.193
Published on

ಬೆಂಗಳೂರು: ಬಿಜೆಪಿ ಸರ್ಕಾರ ಆಡಳಿತಾವಧಿಯಲ್ಲಿ 40 ಪರ್ಸೆಂಟ್‌ ಕಮಿಷನ್ ಆರೋಪ ಮಾಡಿ, ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಅವರು ಇಂದು ನಿಧನರಾಗಿದ್ದಾರೆ.

ಈ ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಆಡಳಿತದಲ್ಲಿ 40% ಕಮಿಷನ್​ ನಡೆದಿದೆ ಎಂದು ಆರೋಪಿಸಿದ್ದ ಕೆಂಪಣ್ಣ ಅವರು ಇದೊಂದು ಸುದ್ದಿ ಮೂಲಕವೇ ಅಂದು ರಾಜ್ಯದ ಜನತೆಯ ಗಮನೆಸೆಳೆದಿದ್ದರು. 84 ವರ್ಷ ವಯಸ್ಸಿನವರಾಗಿದ್ದ ಕೆಂಪಣ್ಣ ಇಂದು ಬೆಂಗಳೂರಿನ ಜ್ಯೋತಿಪುರದಲ್ಲಿರುವ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು.

ಇತ್ತೀಚೆಗಷ್ಟೇ ತೀವ್ರ ಅನಾರೋಗ್ಯದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದು ಮನೆಗೆ ಹಿಂತಿರುಗಿದ್ದ ಕೆಂಪಣ್ಣ, ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಹೃದಯಾಘಾತಕ್ಕೆ ತುತ್ತಾಗಿ ಇಹಲೋಕ ತ್ಯಜಿಸಿದ್ದಾರೆ.

ಸಿಎಂ ಸಂತಾಪ:

"ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರ ನಿಧನ ವಾರ್ತೆ ನೋವುಂಟುಮಾಡಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ದೇಶಾದ್ಯಂತ ಸುದ್ದಿ ಮಾಡಿದ್ದ 40% ಕಮಿಷನ್ ಹಗರಣವನ್ನು ಹೊರತಂದು, ಗುತ್ತಿಗೆ ಕಾಮಗಾರಿಗಳಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರದ ವಿರುದ್ಧ ಅವರು ಸೆಟೆದು ನಿಂತಿದ್ದರು. ಯಾವುದೇ ಒತ್ತಡ, ಆಮಿಷಗಳಿಗೆ ಒಳಗಾಗದ ನಿರ್ಭೀತ ಧ್ವನಿಯೊಂದನ್ನು ನಾಡು ಇಂದು ಕಳೆದುಕೊಂಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ವರ್ಗಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net