ಸಂಕಲ್ಪದ ಗುಟ್ಟು ಬಿಟ್ಟು ಕೊಡದ ಡಿ.ಕೆ.ಶಿವಕುಮಾರ್ | Mantralaya visit

IMG-20251022-WA0018
Published on

ಬೆಂಗಳೂರು: ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಮೂಲ ಬೃಂದಾವನ ದರ್ಶನ ಪಡೆದ ಡಿಸಿಎಂ ಡಿ.ಕೆ.ಶಿವಕುಮಾರ್, ಈ ಬಾರಿಯ ಸಂಕಲ್ಪದ ಗುಟ್ಟು ಬಿಟ್ಟು ಕೊಡದೇ ಗಮನಸೆಳೆದರು.

ದೀಪಾವಳಿ ಬಲಿಪಾಡ್ಯಮಿ ನಿಮಿತ್ತ ಮಂತ್ರಾಲಯಕ್ಕೆ ಪತ್ನಿಯೊಂದಿಗೆ ಬುಧವಾರ ತೆರಳಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್, ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನ ದರ್ಶನ, ಸಾಲಿಗ್ರಾಮ ಪೂಜೆ ಬಳಿಕ ಶ್ರೀಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರ ಆಶೀರ್ವಾದ ಪಡೆದರು.

ಇದೇ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಶ್ರೀಗಳು ಪೇಟ ತೊಡಿಸಿ, ವಿಶೇಷ ವಸ್ತ್ರ ಹೆಗಲ ಮೇಲೆ ಹಾಕಿದರು. ನಂತರ ಹಾರ ಹಾಕಿ ಸತ್ಕರಿಸಿ, ಬಲಿಪಾಢ್ಯಮಿ ದಿನ ರಾಯರ ಸನ್ನಿಧಿಗೆ ನೀವು ಸಲ್ಲಿಸಿದ ಪೂಜೆಯು ನಾಡಿಗೆ ಒಳ್ಳೆಯದು ಮಾಡಲಿ, ಸರ್ವ ಜನರಿಗೂ ಒಳಿತಾಗಲಿ ಎಂದು ಆಶೀರ್ವಚನ ನೀಡಿದರು.

ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು, ದೀಪಾವಳಿ ಹಬ್ಬದ ವಿಶೇಷ ದಿನ ಪತ್ನಿಯೊಂದಿಗೆ ಆಗಮಿಸಿ ರಾಯರ ಮೂಲ ಬೃಂದಾವನ ದರ್ಶನ ಪಡೆದಿದ್ದೇನೆ. ಇದೇ ವೇಳೆ ಪೀಠಾಧಿಪತಿ ಆಶೀರ್ವದಿಸಿ ಶುಭ ಹಾರೈಸಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಗೆ ಅಧಿಕಾರ

ಕಳೆದ ಬಾರಿ ಭಾರತ್ ಜೋಡೋ ಯಾತ್ರೆಗಾಗಿ ಪಕ್ಷದ ನಾಯಕ ರಾಹುಲ್ ಗಾಂಧಿ ಜತೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಹೆಜ್ಜೆ ಹಾಕಿದ್ದರು. ಇದೇ ವೇಳೆ ಮಂತ್ರಾಲಯದಲ್ಲಿ ರಾಯರ ಮೂಲ ಬೃಂದಾವನ ದರ್ಶನದ ವೇಳೆ ಮಾಡಿದ ಸಂಕಲ್ಪದಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂತು ಎಂದು ಉತ್ತರಿಸಿದರು.

ಹಾಗಿದ್ದರೆ ಈ ಬಾರಿಯ ಸಂಕಲ್ಪವೇನು ? ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಡಿ.ಕೆ.ಶಿವಕುಮಾರ್ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದರು. ಸಂಸದ, ಶಾಸಕರು ಹಾಗೂ ಪಕ್ಷದ ಮುಖಂಡರು ಜತೆಗಿದ್ದರು.

ರಾಯಚೂರು ತಾಲೂಕಿನ ಗಾಣದಾಳಕ್ಕೆ ಪ್ರಯಾಣ ಬೆಳೆಸಿದ ಡಿ.ಕೆ.ಶಿವಕುಮಾರ್, ಪತ್ನಿ ಸಹಿತರಾಗಿ ಪಂಚಮುಖಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ರಾಯಚೂರು ಗ್ರಾಮೀಣ ಬ್ಲಾಕ್ ನ ಪಕ್ಷದ ನೂತನ ಪದಾಧಿಕಾರಿಗಳ ಸಭೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net