'ಮೈಚಾಂಗ್'​ ಚಂಡಮಾರುತ: ಚೆನ್ನೈನಲ್ಲಿ ನಿಲ್ಲದ ವರುಣನ ಆರ್ಭಟ! ಬೆಂಗಳೂರಿಗೆ ಎಷ್ಟು ದಿನ ಮಳೆ? ಇಲ್ಲಿದೆ ವರದಿ

Untitled design (28)
Published on

ಬೆಂಗಳೂರು: ಮೈಚಾಂಗ್ ಚಂಡಮಾರುತದ ಹಿನ್ನೆಲೆ ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಬಿರುಸಿನ ಗಾಳಿ ಸಹಿತ ಸುರಿಯುತ್ತಿರುವ ನಿರಂತರ ಮಳೆಗೆ ಸದ್ಯ ತಮಿಳುನಾಡು ತತ್ತರಿಸಿದೆ. ವರಣನ ಆರ್ಭಟಕ್ಕೆ ಚೆನ್ನೈ ಜಿಲ್ಲಾಡಳಿತ ಕೆಲವು ಪ್ರದೇಶಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. ಇದರೊಟ್ಟಿಗೆ ಖಾಸಗಿ ಸಂಸ್ಥೆಯ ನೌಕರರಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಸದ್ಯ ಮೈಚಾಂಗ್ ಚಂಡಮಾರುತದ ಎಫೆಕ್ಟ್​ ಬೆಂಗಳೂರಿಗೆ ತಟ್ಟಲಿದೆಯಾ? ಎಷ್ಟು ದಿನ ಮಳೆಯಾಗಲಿದೆ ಎಂಬುದರ ಮಾಹಿತಿ ಇಲ್ಲಿದೆ.

ಚಂಡಮಾರುತವು ಚೆನ್ನೈ ಮತ್ತು ಪುದುಚೇರಿ ಬಳಿ ಮಂಗಳವಾರ ಮುಂಜಾನೆ ಆಂಧ್ರಪ್ರದೇಶದ ಕರಾವಳಿಯನ್ನು ದಾಟುವ ಸಾಧ್ಯತೆಯಿದ್ದು, ಸದ್ಯ ಕರಾವಳಿ ಪ್ರದೇಶಗಳು ಮಳೆಯಿಂದ ಜರ್ಜರಿತವಾಗಿದೆ. ಹವಾಮಾನ ವೈಪರೀತ್ಯದಿಂದ ಬೆಂಗಳೂರಿನಲ್ಲಿ ಮೋಡ ಕವಿದಿದ್ದು, ಸದ್ಯ ಶೀತ ವಾತಾವರಣಕ್ಕೆ ಸಾಕ್ಷಿಯಾಗಿದೆ. "ಮುಂದಿನ ಕೆಲವು ದಿನಗಳಲ್ಲಿ ಮಳೆಯಾಗುವ ಸಾಧ್ಯತೆಯೊಂದಿಗೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವನ್ನು ನಿರೀಕ್ಷಿಸಬಹುದು" ಎಂದು ವರದಿ ಉಲ್ಲೇಖಿಸಿದೆ.

ತಾಪಮಾನವು 27 ಡಿಗ್ರಿ ಸೆಲ್ಸಿಯಸ್ ಮತ್ತು 19 ಡಿಗ್ರಿ ಸೆಲ್ಸಿಯಸ್ ನಡುವೆ ಏರಿಳಿತಗೊಳ್ಳುತ್ತದೆ. ಇದರ ಜತೆಗೆ ಗಾಳಿ ಬೀಸುವ ನಿರೀಕ್ಷೆಯಿದೆ. 30ರಿಂದ 40 ಕಿಮೀ ವೇಗ, ಒಂದು ಅಥವಾ ಎರಡು ದಿನಗಳವರೆಗೆ ಶೀತದ ಅಲೆ ಸಂಭಾವ್ಯವಾಗಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.

ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಲಘು ಮಳೆಯಾಗುವ ಸಾಧ್ಯತೆಯಿದೆ ಎಂದು ಪ್ರಾದೇಶಿಕ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, "ಕೆಲವು ಪ್ರದೇಶಗಳಲ್ಲಿ ಮುಂಜಾನೆಯ ಸಮಯದಲ್ಲಿ ಮಂಜು ಆವರಿಸಬಹುದು. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 24 ಮತ್ತು 20 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆಯಿದೆ" ಎಂದು ವರದಿ ಹೇಳಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net