

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಮಂಗಳವಾರ (ಮೇ 9) ‘ಮೋಚಾ’ ಚಂಡಮಾರುತವಾಗಿ ರೂಪುಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮೂನ್ಸೂಚನೆ ಕೊಟ್ಟಿದೆ. ಪ್ರಸಕ್ತ ವರ್ಷದ ಮೊದಲ ಸೈಕ್ಲೋನ್ ಇದಾಗಿದೆ.
ತಮಿಳುನಾಡಿನ ಕರಾವಳಿ ಸಮೀಪದ ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ ಮಾರುತಗಳಿದ್ದು, ಮುಂದಿನ 24 ಗಂಟೆಯಲ್ಲಿ ಇದು ತೀವ್ರಗೊಂಡು ಚಂಡಮಾರುತವಾಗಿ ಪರಿವರ್ತನೆಯಾಗಲಿದೆ. ನಂತರ, ಬಂಗಾಳಕೊಲ್ಲಿ ಮಧ್ಯ ಭಾಗದತ್ತ, ಉತ್ತರ ಅಂಡಮಾನ್ ಸಮುದ್ರ ಕಡೆಗೆ ಮಾರುತಗಳು ಚಲಿಸಲಿವೆ. ಇದರ ಪರಿಣಾಮ ಕರ್ನಾಟಕ, ಕೇರಳ, ತಮಿಳುನಾಡು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ಮಾಹೆ, ಕಾರೈಕಲ್ ಹಾಗೂ ಪುದುಚೇರಿಯಲ್ಲಿ ಮೇ 8ರಿಂದ ಮೇ 12ರವರೆಗೆ ಭಾರಿ ಮಳೆ ಸುರಿಯಲಿದೆ.
ಇದನ್ನೂ ಓದಿ : ಒಂದೇ ಸಮಯದಲ್ಲಿ ಗರ್ಭಿಣಿಯರಾದ ನಾಲ್ವರು ಸಹೋದರಿಯರು!
ಪ್ರತಿ ಗಂಟೆಗೆ 60 ಕಿ.ಮೀ.ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಬಂಗಾಳಕೊಲ್ಲಿ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಅಕ್ಕಪಕ್ಕದ ಪ್ರದೇಶಗಳಲ್ಲಿ ಗಾಳಿ ವೇಗ 50-60 ಕಿ.ಮೀ.ನಿಂದ 70 ಕಿ.ಮೀ.ಗೆ ಕ್ರಮೇಣ ಹೆಚ್ಚಾಗಲಿದೆ. ಇದರಿಂದ ಎತ್ತರದ ಅಲೆಗಳು ಏಳಲಿವೆ. ಮೀನುಗಾರರು, ಸಣ್ಣ ಹಡಗುಗಳು, ದೋಣಿಗಳು ಸಮುದ್ರದಲ್ಲಿ ಇಳಿಯದಂತೆ ಹಾಗೂ ಸಮುದ್ರದಲ್ಲಿ ತಂಗಿರುವ ಹಡುಗುಗಳು, ದೋಣಿಗಳು ಹಾಗೂ ಮೀನುಗಾರರ ಬೋಟ್‌ಗಳು ವಾಪಸ್ ಬರುವಂತೆ ಐಎಂಡಿ ಈಗಾಗಲೇ ಎಚ್ಚರಿಕೆ ನೀಡಿದೆ. ಮೇ 8ರಿಂದ ಮೇ 11ರವರೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಯಾವುದೇ ರೀತಿಯ ಪ್ರವಾಸೋದ್ಯಮ ಚಟುವಟಿಕೆ ನಡೆಸದಂತೆಯೂ ಎಚ್ಚರಿಕೆ ಕೊಡಲಾಗಿದೆ.
4 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್: ಚಂಡಮಾರುತ ಪರಿಣಾಮ ಮುಂದಿನ 5 ದಿನ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗದಲ್ಲಿ ಮೇ 11 ಮತ್ತು ಮೇ 12ರಂದು ಬಿರುಸಾಗಿ ಮಳೆ ಸುರಿಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ. ತುಮಕೂರಿನ ಪಾವಗಡ, ಮೈಸೂರಿನ ಹುಣಸೂರು ಸೇರಿ ರಾಜ್ಯದ ಹಲವು ಭಾಗಗಳಲ್ಲಿ ಭಾನುವಾರವೂ ವರ್ಷಧಾರೆಯಾಗಿದೆ. ಬೆಳಗ್ಗೆಯಿಂದಲೇ ಜಿಟಿ ಜಿಟಿ ಮಳೆ ಸುರಿಯುತ್ತಿತ್ತು. ಕೆಲವಡೆ ಬಿರುಸಾಗಿ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತು.