

ಬೆಂಗಳೂರು: ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೈಗ್ರೌಂಡ್ಸ್ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಒಡಿಶಾ ಮೂಲದ ಗೋಪಾಲ್ ದಲೈ (೪೦) ಮೃತ ಸೈಕಲ್ ಸವಾರ. ಈ ಸಂಬಂಧ ಕೃತ್ಯ ಎಸಗಿದ ಟಿಪ್ಪರ್ ಲಾರಿ ಚಾಲಕ ಮಂಜೇಗೌಡ(೩೮) ಎಂಬಾತನನ್ನು ಬಂಧಿಸಲಾಗಿದೆ.
ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿರುವ ಗೋಪಾಲ್, ಗಾಂಧಿನಗರದಲ್ಲಿರುವ ಹೋಟೆಲ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದು, ಬುಧವಾರ ರಾತ್ರಿ ಪಾಳಿಯ ಕರ್ತವ್ಯ ಮುಗಿಸಿ ಬೆಳಗ್ಗೆ ೭.೪೫ರ ವೇಳೆ ಸೈಕಲ್‌ನಲ್ಲಿ ಮತ್ತೊಂದು ಕಂಪನಿಯಲ್ಲಿ ಬೆಳಗ್ಗಿನ ಪಾಳಿ ಕೆಲಸಕ್ಕೆ ಚಾಲುಕ್ಯ ವೃತ್ತದ ಮಾರ್ಗವಾಗಿ ಹೋಗುತ್ತಿದ್ದರು. ಇದೇ ವೇಳೆ ಟಿಪ್ಪರ್ ಲಾರಿ ಚಾಲಕ ಟ್ರಿಲೈಟ್ ಜಂಕ್ಷನ್ ಕಡೆಯಿಂದ ಬಸವೇಶ್ವರ ಜಂಕ್ಷನ್ ಕಡೆ ಅತೀವೇಗವಾಗಿ ಬಂದು ಫೇರ್ ಫೀಲ್ಡ್ ಲೇಔಟ್ ಜಂಕ್ಷನ್ ಹತ್ತಿರ ಗೋಪಾಲ್ ಸೈಕಲ್‌ಗೆ ಡಿಕ್ಕಿ ಹೊಡೆದಿದ್ದು, ಕೆಳಗೆ ಬಿದ್ದ ಗೋಪಾಲ್ ಮೇಲೆ ಲಾರಿಯ ಚಕ್ರಗಳು ಹರಿದ ಪರಿಣಾಮ ಆತ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಹೈಗ್ರೌಂಡ್ಸ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.