

ಹನೂರು : ಅಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ದೇಶದ ಸೈನಿಕರಿಗೆ ಒಳಿತಾಗಲಿ ಹಾಗೂ ಇನ್ನಷ್ಟು ಶಕ್ತಿ ಸಿಗುವಂತಾಗಲಿ ಎಂದು ಹಾರೈಸಿ ಬೆಂಗಳೂರಿನ ಏಳು ಯುವ ಭಕ್ತರು ಸೋಮವಾರ ಸೈಕಲ್ ಯಾತ್ರೆಯ ಮೂಲಕ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಗೆ ಆಗಮಿಸಿ ಪೂಜೆ ಸಲ್ಲಿಸಿದರು.
ಬೆಂಗಳೂರಿನ ದೇವರಾಜು, ಗಣೇಶ್, ಮಹೇಶ್, ಸಾರುಹಾಸನ್, ವಿಷ್ಣುಪ್ರಸಾದ್, ಕೃಷ್ಣ, ಹಾಗೂ ಸುದರ್ಶನ್ ಎಂಬ ಯುವ ಭಕ್ತರು ಸೈನಿಕರಿಗೆ ಒಳಿತಾಗಲೆಂದು ಮ.ಬೆಟಕ್ಕೆ ಸೈಕಲ್ ಯಾತ್ರೆಯನ್ನು ಕೈಗೊಂಡಿದ್ದರು. ಬೆಂಗಳೂರಿನಿಂದ ಹೊರಟ ಇವರು ಕನಕಪುರ ಮಾರ್ಗವಾಗಿ ತೆರಳಿ ಮಳವಳ್ಳಿಯಲ್ಲಿ ರಾತ್ರಿ ತಂಗಿದ್ದರು. ಕೊಳ್ಳೇಗಾಲದ ಮಾರ್ಗವಾಗಿ ಸಂಚರಿಸಿ ಕೌದಳ್ಳಿಯಲ್ಲಿ ವಾಸ್ತವ್ಯ ಹೂಡಿದ್ದರು. ಸೋಮವಾರ ತಾಳುಬೆಟ್ಟಕ್ಕೆ ತೆರಳಿದ ಯುವ ಭಕ್ತರು ಮಾದಪ್ಪನನ್ನು ನೆನೆದು ಕೈ ಮುಗಿದು ಮ.ಬೆಟ್ಟಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ಈ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋ ಹರಿ ಬಿಟ್ಟಿದ್ದು, ಭಕ್ತರು ಹಾಗೂ ಸಾರ್ವಜನಿಕರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಗಿದೆ.