

ಬೆಂಗಳೂರು: ನಟ ಉಪೇಂದ್ರ ಹಾಗೂ ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್‌ಗಳನ್ನು ಸೈಬರ್ ವಂಚಕರು ಹ್ಯಾಕ್ ಮಾಡಿ ಕೆಲವರಿಂದ ಹಣ ಪಡೆದಿದ್ದಾರೆ.
ತಮ್ಮ ಮೊಬೈಲ್ ಹ್ಯಾಕ್ ಆಗಿರುವುದನ್ನು ಅರಿತ ಉಪೇಂದ್ರ ದಂಪತಿ ಈ ಬಗ್ಗೆ ಕೇಂದ್ರ ವಿಭಾಗದ ಸದಾಶಿವನಗರ ಠಾಣೆಗೆ ತೆರಳಿ ದೂರು ಸಲ್ಲಿಸಿದರು. ತಮ್ಮ ಮೊಬೈಲ್ ಹ್ಯಾಕ್ ಆಗಿರುವ ಬಗ್ಗೆ ಉಪೇಂದ್ರ ಅವರು ಸಾಮಾಜಿಕ ಜಾಲತಾಣಗಳ ಮೂಲಕವೂ ಮಾಹಿತಿ ನೀಡಿ ತಮ್ಮ ಹೆಸರು ಹೇಳಿಕೊಂಡು ಯಾರಾದರೂ ಹಣ ಕೇಳಿದರೆ ಕೊಡಬೇಡಿ ಮನವಿ ಮಾಡಿದ್ದಾರೆ.
ನಂಬರ್ ಡಯಾಲ್ ಮಾಡುತ್ತಿದಂತೆ ಹ್ಯಾಕ್:
ಸೋಮವಾರ ಬೆಳಗ್ಗೆ ಪ್ರಿಯಾಂಕಾ ಅವರಿಗೆ ಕರೆ ಮಾಡಿದ್ದ ಸೈಬರ್ ವಂಚಕ, ನಿಮ್ಮ ಆರ್ಡರ್ ಡಿಲಿವರಿ ಮಾಡಲು ವಿಳಾಸ ಸಿಗುತ್ತಿಲ್ಲ. ಈ ನಂಬರ್ ಡಯಲ್ ಮಾಡಿ ಖಚಿತಪಡಿಸಿದರೆ ಡಿಲಿವರಿ ಮಾಡುತ್ತೇವೆ ಎಂದು ಹ್ಯಾಶ್ ಮತ್ತು ಸ್ಟಾರ್ ಸಹಿತವಿರುವ ನಂಬರ್ ಹೇಳಿದ್ದಾನೆ. ಆ ನಂಬರ್ ಡಯಲ್ ಮಾಡುತ್ತಿದಂತೆ ಪ್ರಿಯಾಂಕಾ ಅವರ ಫೋನ್ ಹ್ಯಾಕ್ ಆಗಿದೆ. ತನ್ನ ಫೋನ್‌ನಲ್ಲಿ ಸಮಸ್ಯೆ ಇರಬಹುದು ಎಂದುಕೊಂಡ ಪ್ರಿಯಾಂಕಾ ಅವರು ಬಳಿಕ ಪತಿ ಉಪೇಂದ್ರ ಹಾಗೂ ಪರಿಚಿತರಾದ ಮಹಾದೇವ್ ಅವರ ಫೋನ್‌ಗಳಿಂದ ಅದೇ ನಂಬರ್ ಡಯಲ್ ಮಾಡಿದ್ದಾರೆ. ಕೂಡಲೇ ಆ ಫೋನ್‌ಗಳೂ ಹ್ಯಾಕ್ ಆಗಿವೆ. ವಂಚಕರು ಪ್ರಿಯಾಂಕ ಮತ್ತ ಉಪೇಂದ್ರ ಅವರ ಕಾಂಟ್ಯಾಕ್ಟ್‌ನಲ್ಲಿರುವವರಿಗೆ ಸಂದೇಶ ಕಳುಹಿಸಿ ಅವರಿಂದ ೧.೭ ಲಕ್ಷದಷ್ಟು ಹಣ ಆಲ್‌ಲೈನ್ ಮೂಲಕ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ದಯವಿಟ್ಟು ಹಣ ಕಳುಹಿಸಬೇಡಿ:
ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಉಪೇಂದ್ರ ಮಾತನಾಡಿ, ಫೋನ್ ನಂಬರ್ ಹ್ಯಾಕ್ ಆದ ಬಳಿಕ ನಮ್ಮಿಬ್ಬರ ನಂಬರ್‌ಗಳಿಂದ ಹಣ ಕೇಳಿಕೊಂಡು ಪರಿಚಿತರಿಗೆ ಮೆಸೇಜ್‌ಗಳು ಹೋಗಿವೆ. ಆ ಬಗ್ಗೆ ಖಚಿತಪಡಿಸಲು ಅವರು ಕರೆ ಮಾಡಿದರೂ ನಮಗೆ ತಲುಪುತ್ತಿಲ್ಲ. ವಂಚಕರು ಕಾಲ್ ಫಾರ್ವರ್ಡ್ ಮಾಡಿದ್ದಾರೆ. ನಮ್ಮ ಪರಿಚಿತರು ಮೂರ್ನಾಲ್ಕು ಜನ ತುರ್ತು ಅಗತ್ಯವಿರಬಹುದು ಎಂದು ಸುಮಾರು ೫೦ ಸಾವಿರದಷ್ಟು ಹಣವನ್ನೂ ವರ್ಗಾಯಿಸಿದ್ದಾರೆ. ನನ್ನ ಮಗ ಕೂಡ ಹಣ ವರ್ಗಾಯಿಸಿದ್ದಾನೆ. ಈ ರೀತಿಯ ಮೆಸೇಜ್‌ಗಳು ಬಂದರೆ ಯಾರೂ ದಯವಿಟ್ಟು ನಂಬಿ ಹಣ ಕಳುಹಿಸಬೇಡಿ ಎಂದು ಮನವಿ ಮಾಡಿದ್ದಾರೆ.
ಗಡಿಬಿಡಿಯಲ್ಲಿ ನಂಬರ್ ಡಯಲ್ ಮಾಡಿದೆ:
ಪ್ರಿಯಾಂಕಾ ಉಪೇಂದ್ರ ಮಾತನಾಡಿ, ಮನೆಗೆ ಆರ್ಡರ್ ಮಾಡಿದ್ದ ಒಂದಷ್ಟು ವಸ್ತುಗಳು ಬರಬೇಕಿತ್ತು. ನಾನು ಅದೇ ಕಾಲ್ ಇರಬಹುದು ಎಂದು ಭಾವಿಸಿ ವಂಚಕರ ಕರೆಗೆ ಉತ್ತರಿಸಿದಾಗ, ಈ ರೀತಿ ಹ್ಯಾಕ್ ಮಾಡಿದ್ದಾರೆ. ಸ್ವಲ್ಪ ಅನುಮಾನವಿತ್ತು, ಆದರೆ ನಾನು ಗಡಿಬಿಡಿಯಲ್ಲಿ ಅವರು ಹೇಳಿದ ನಂಬರ್ ಡಯಲ್ ಮಾಡಿದಾಗ ಈ ರೀತಿ ಆಗಿದೆ. ನಂತರ ನನ್ನ ವಾಟ್ಸ್‌ಆ್ಯಪ್ ಮೂಲಕ ನನ್ನ ಸಂಪರ್ಕದಲ್ಲಿದ್ದವರಿಗೆ, ತುರ್ತಾಗಿ ಹಣ ಬೇಕಿದೆ ೨ ಗಂಟೆಯೊಳಗೆ ವಾಪಾಸ್ ಕಳಿಸುತ್ತೇವೆ ಎಂದು ಹಣ ಕಳಿಸುವಂತೆ ಮೆಸೇಜ್ ಮಾಡಿದ್ದಾರೆ. ದಯವಿಟ್ಟು ಈ ರೀತಿಯ ಬೇಡಿಕೆಗಳನ್ನು ನಂಬಿ ಹಣ ಕಳುಹಿಸಬೇಡಿ. ಎಐ ಕೂಡ ದುರ್ಬಳಕೆ ಆಗುತ್ತಿದೆ ಎಂದು ಹೇಳಿದ್ದಾರೆ.