

Cyber Fraud: ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಎಐ ಕಾಲದಲ್ಲಿ ಎಷ್ಟು ಹುಷಾರಾಗಿದ್ದರೂ ಸಾಲದು. ನಮ್ಮಂತೆಯೇ ಹೋಲುವ ಇನ್ನೊಂದು ಮುಖವನ್ನು ಪರಿಚಯಿಸುವ, ಮಾರ್ಫ್ ಮಾಡಿ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಅಥವಾ ನಕಲಿ ವಿಡಿಯೋ, ಫೋಟೋಗಳನ್ನು ಹರಿಬಿಡುವ ಈ ಡಿಜಿಟಲ್ ಯುಗದಲ್ಲಿ, ಯಾರು ಹೇಗೆ ಬೇಕಾದರೂ ವಂಚನೆಯ ಬಲೆಗೆ ಸಿಲುಕಬಹುದು. ಇಂತಹ ಆನ್‌ಲೈನ್ ವಂಚನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಎಂಬುದಕ್ಕೆ ಇಲ್ಲೊಂದು ಘಟನೆ ಜ್ವಲಂತ ಸಾಕ್ಷಿ.
ಕಳೆದ ಎರಡು ವರ್ಷಗಳಿಂದ ನಡೆದ ಈ ಹಗರಣದಲ್ಲಿ, 734 ಆನ್‌ಲೈನ್ ವಹಿವಾಟುಗಳು ನಡೆದಿರುವುದು ತನಿಖೆಯಲ್ಲಿ ಬಯಲಾಗಿದೆ. ಕಿರಾತಕಿ ಮಹಿಳೆಯರ ಪ್ರೀತಿಯ ಮಾತಿಗೆ ಮರುಳಾದ 80 ವರ್ಷದ ವೃದ್ಧ, ಒಂದೇ ಒಂದು ಫೇಸ್ಬುಕ್ ಫ್ರೆಂಡ್ ರಿಕ್ವೆಸ್ಟ್ನಿಂದ ಬರೋಬ್ಬರಿ 9 ಕೋಟಿ ರೂ. ಹಣ ಕಳೆದುಕೊಂಡಿರುವುದು ನಿಜಕ್ಕೂ ಅಚ್ಚರಿಯ ಸಂಗತಿ. ಪ್ರಸ್ತುತ, ಪ್ರಕರಣವನ್ನು ಸೈಬರ್ ಪೊಲೀಸರು ಕೈಗೆತ್ತಿಕೊಂಡಿದ್ದು, ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ.
ಏಪ್ರಿಲ್ 2023ರಲ್ಲಿ, ಶಾರ್ವಿ ಎಂಬ ಅನಾಮಿಕ ಮಹಿಳೆಯೊಬ್ಬಳು, ವೃದ್ಧನಿಗೆ ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸತ್ತಾಳೆ. ಇಬ್ಬರಿಗೂ ಪರಸ್ಪರ ಪರಿಚಯವಿಲ್ಲದಿದ್ದರೂ, ಕೆಲವು ದಿನಗಳ ಬಳಿಕ ವೃದ್ಧನ ಮನಸ್ಸು ಯುವತಿಯ ಸ್ನೇಹದ ರಿಕ್ವೆಸ್ಟ್ಗೆ ಜಾರಿದೆ. ಫೇಸ್‌ಬುಕ್‌ನಲ್ಲಿ ಸ್ನೇಹಿತರಾಗಿದ್ದೇ ತಡ ಇಬ್ಬರೂ ಶೀಘ್ರದಲ್ಲೇ ಚಾಟಿಂಗ್ ಮಾಡಲು ಶುರು ಮಾಡುತ್ತಾರೆ. ಲವ್ವಿಡವ್ವಿ ಸಂಭಾಷಣೆಗಳು ಹೆಚ್ಚಾದಂತೆ ಇಬ್ಬರೂ ಪರಸ್ಪರ ಫೋನ್ ನಂಬರ್ಗಳನ್ನು ಹಂಚಿಕೊಳ್ಳುತ್ತಾರೆ. ಅಲ್ಲಿಂದ ಫೇಸ್ಬುಕ್ ಚಾಟಿಂಗ್ ವಾಟ್ಸಾಪ್ಗೆ ಬದಲಾಗುತ್ತದೆ.
ವೃದ್ಧನೊಂದಿಗೆ ಸಂಬಂಧ ಗಟ್ಟಿಯಾಗುತ್ತಿದ್ದಂತೆ ತಾನು ಗಂಡನಿಲ್ಲದ ಮಹಿಳೆ ಎಂದ ಶಾರ್ವಿ, ನನಗೆ ಇಬ್ಬರು ಮಕ್ಕಳಿದ್ದಾರೆ. ಅವರ ವಿದ್ಯಾಭ್ಯಾಸ ನೋಡಿಕೊಳ್ಳುತ್ತಿದ್ದೀನಿ. ಜೀವನ ತುಂಬ ಕಷ್ಟಕರವಾಗಿದೆ. ಮುಂದೇನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದು ವೃದ್ಧನ ಬಳಿ ಅಳಲು ತೋಡಿಕೊಂಡಿದ್ದಳು. ಇದಾದ ಕೆಲವೇ ದಿನಗಳಲ್ಲಿ ಶಾರ್ವಿ ಹೆಸರೇಳಿಕೊಂಡು ಬಂದ ಕವಿತಾ ಎಂಬ ಮಹಿಳೆ, ವೃದ್ಧನ ವಾಟ್ಸಾಪ್ ನಂಬರ್ಗೆ ನಾನು ನಿಮ್ಮ ಸ್ನೇಹಿತೆಯಾಗಲು ಬಯಸುತ್ತೇನೆ ಎಂದಿದ್ದಳು. ಇದಕ್ಕೆ ಒಪ್ಪಿಕೊಂಡ ವೃದ್ಧನಿಗೆ, ಅಶ್ಲೀಲ ಸಂದೇಶಗಳನ್ನು ಕಳಿಸಿ, ಹಣಕ್ಕಾಗಿ ಬೆದರಿಕೆಯೊಡ್ಡಿದಳು.
ಇದೇ ರೀತಿ ಇನ್ನಿಬ್ಬರು ಮಹಿಳೆಯರು, ತಾವು ಶಾರ್ವಿಯ ಸಹೋದರಿಯರು ಎಂದು ಹೇಳಿಕೊಂಡು ವೃದ್ಧನಿಗೆ ಮಾನಸಿಕವಾಗಿ ಹಿಂಸೆ ಮತ್ತು ಬೆದರಿಕೆಗಳನ್ನು ಹಾಕತೊಡಗಿದರು. ಶಾರ್ವಿ ಮೃತಪಟ್ಟಿದ್ದಾಳೆಂದು ಹೇಳಿ, ನಕಲಿ ಆಸ್ಪತ್ರೆಯ ಬಿಲ್ ಕಳುಹಿಸಿದ ಕಿರಾತಕಿಯರು, ಇದಕ್ಕೆಲ್ಲ ನೀನೇ ಕಾರಣ. ಹಣ ಕೊಡದಿದ್ದರೆ ಪೊಲೀಸ್ ಠಾಣೆಗ ಹೋಗ್ತೀವಿ ಎಂದು ಹೆದರಿಸಿದ್ದಾರೆ. ಇದರಿಂದ ಗೊಂದಲಕ್ಕೆ ಸಿಲುಕಿದ ವೃದ್ಧ, ನಾಲ್ವರು ಮಹಿಳೆಯರು ಕೇಳಿದಷ್ಟು ಹಾಗೂ ಕೇಳಿದಾಗಲೆಲ್ಲ ಹಣವನ್ನು ಕೊಟ್ಟಿದ್ದಾರೆ.
ಏಪ್ರಿಲ್ 2023ರಿಂದ ಜನವರಿ 2025 ರವರೆಗೆ, ವೃದ್ಧ 734 ವಹಿವಾಟುಗಳಲ್ಲಿ ಬರೋಬ್ಬರಿ 8.7 ಕೋಟಿ ರೂ. ಜೀವಮಾನ ಉಳಿತಾಯದ ಹಣವನ್ನು ಕಳೆದುಕೊಂಡಿರುವುದು ತನಿಖೆಯಲ್ಲಿ ಸ್ಪಷ್ಟವಾಗಿದೆ. ತನ್ನ ಉಳಿತಾಯವೆಲ್ಲ ಖಾಲಿಯಾದರೂ ವಂಚಕರ ಬೇಡಿಕೆ ತಪ್ಪಿರಲಿಲ್ಲ. ಇದರಿಂದ ಕಂಗಾಲಾದ ವೃದ್ಧ, ತನ್ನ ಸೊಸೆ ಮತ್ತು ಮಗನಿಂದಲೂ ಲಕ್ಷಗಟ್ಟಲೇ ಹಣ ಪಡೆದು, ಮಹಿಳೆಯರಿಗೆ ಕೊಟ್ಟಿರುವುದು ಬೆಳಕಿಗೆ ಬಂದಿದೆ,(ಏಜೆನ್ಸೀಸ್).