

ನ್ಯೂಯಾರ್ಕ್: ಪ್ರಖ್ಯಾತ ಸಾಮಾಜಿಕ ಜಾಲತಾಣ ಟ್ವಿಟರ್ ಮೇಲೆ ಅತಿದೊಡ್ಡ ಸೈಬರ್ ದಾಳಿ ನಡೆದಿದೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಸೇರಿ ವಿಶ್ವದ ಹಲವು ಪ್ರಮುಖರ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದ್ದು, ಬಿಟ್ ಕಾಯಿನ್ ಮೂಲಕ ಹಣ ಕಳಿಸಿ ಎಂಬ ಟ್ವೀಟ್ ಪ್ರಕಟಿಸಿದ್ದಾರೆ. ಇದು ಸಂಯೋಜಿತ ಸೈಬರ್ ಕೃತ್ಯ ಎಂದು ಟ್ವಿಟರ್ ಸಂಸ್ಥೆ ಹೇಳಿಕೊಂಡಿದೆ.
ಸಂಸ್ಥೆಯ ಕೆಲ ಉದ್ಯೋಗಿಗಳನ್ನು ಗುರಿ ಮಾಡಿದ ಹ್ಯಾಕರ್ಸ್, ಆಂತರಿಕ ವ್ಯವಸ್ಥೆ ಹಾಗೂ ಕೆಲ ಟೂಲ್ಗಳ ಮೂಲಕ ಗಣ್ಯ ವ್ಯಕ್ತಿಗಳ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ ಎಂದು ಟ್ವಿಟರ್ ತಿಳಿಸಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಲ್ಲ ಟ್ವೀಟ್ಗಳನ್ನು ತೆಗೆದುಹಾಕಲಾಗಿದೆ. ಸಂಬಂಧಿಸಿದ ಖಾತೆಗಳನ್ನು ಲಾಕ್ ಮಾಡಲಾಗಿದೆ. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಟ್ವಿಟರ್ ಹೇಳಿಕೊಂಡಿದೆ. ಈ ಬೆನ್ನಲ್ಲೆ ಖಾತೆದಾರರ ಡೇಟಾ ಸುರಕ್ಷತೆ ಬಗ್ಗೆಯೂ ಸಾಕಷ್ಟು ಚರ್ಚೆ ನಡೆಯುತ್ತಿದೆ.
ಆಗಿದ್ದೇನು?: ಪ್ರಮುಖರ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿರುವ ಸೈಬರ್ ಕಳ್ಳರು ಎಲ್ಲರ ಖಾತೆ ಮೂಲಕ ಒಂದೊಂದು ಟ್ವೀಟ್ ಮಾಡಿದ್ದಾರೆ. ನೀಡಲಾಗಿರುವ ಬಿಟ್ ಕಾಯಿನ್ ವಿಳಾಸಕ್ಕೆ 1000 ಡಾಲರ್ ಕಳಿಸಿದರೆ, 2 ಸಾವಿರ ಡಾಲರ್ಗಳನ್ನು ವಾಪಸ್ ನೀಡುವುದಾಗಿ ಆಮಿಷ ಒಡಿದ್ದಾರೆ. ಜನರನ್ನು ಮೋಸಗೊಳಿಸಲು ಈ ರೀತಿಯ ಆಮಿಷ ಒಡ್ಡಲಾಗಿದೆ. ಈ ಟ್ವೀಟ್ ಪ್ರಕಟವಾದ ಒಂದು ಗಂಟೆ ಒಳಗೆ ಒಂದು ಲಕ್ಷ ಡಾಲರ್ಗೂ ಅಧಿಕ ಮೊತ್ತ ಈ ಬಿಟ್ ಕಾಯಿನ್ ವಿಳಾಸಕ್ಕೆ ವರ್ಗಾವಣೆಯಾಗಿದೆ. ಆದರೆ ಇದು ನಿಜವಾಗಿಯೂ ಜನರು ನೀಡಿರುವ ಹಣವೋ? ಅಥವಾ ಹ್ಯಾಕರ್ಗಳೇ ಜನರ ಗಮನ ಸೆಳೆಯಲು ಹಣ ಜಮಾ ಮಾಡಿದ್ದಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ.
ಯಾರ ಖಾತೆಗಳು ಹ್ಯಾಕ್?
ಡೊನಾಲ್ಡ್ ಟ್ರಂಪ್ ಖಾತೆ ಸೇಫ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟರ್ ಖಾತೆ ಸುರಕ್ಷಿತವಾಗಿದೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಲ್ಲ ವೆರಿಫೈಡ್ ಖಾತೆಗಳ ಚಟುವಟಿಕೆಯನ್ನು ಕೆಲಕಾಲ ಸ್ಥಗಿತ ಮಾಡಲಾಗಿತ್ತು. ಈ ಕಾರಣಕ್ಕೆ ಟ್ರಂಪ್ ಖಾತೆ ಸುರಕ್ಷಿತವಾಗಿದೆ ಎನ್ನಲಾಗುತ್ತಿದೆ.
ಮೋಸದ ಜಾಲ
ಈ ವರೆಗೆ ಗ್ರಾಹಕರ ಬ್ಯಾಂಕ್ ಖಾತೆ, ಪಿನ್ನಂಬರ್ಗಳನ್ನು ಕಳವು ಮಾಡಿ ಹಣ ದೋಚುತ್ತಿದ್ದ ಸೈಬರ್ ಕಳ್ಳರು ಈಗ ಹೊಸ ತಂತ್ರ ಅನುಸರಿಸುತ್ತಿದ್ದಾರೆ. ಬಿಟ್ ಕಾಯಿನ್ ವಿಳಾಸಕ್ಕೆ ಸಾವಿರ ಡಾಲರ್ ಕಳಿಸಿದರೆ, ಎರಡು ಸಾವಿರ ಡಾಲರ್ ವಾಪಸ್ ನೀಡುವುದಾಗಿ ಪ್ರಮುಖ ವ್ಯಕ್ತಿಗಳ ಖಾತೆಯಿಂದ ಟ್ವೀಟ್ ಮಾಡುತ್ತಾರೆ. ಖಾತೆ ಹ್ಯಾಕ್ ಆಗಿದೆ ಎಂಬ ವಿಚಾರ ತಿಳಿಯದ ಜನರು ಹಣದ ಆಸೆಗಾಗಿ
ಬಿಟ್ ಕಾಯಿನ್ ಮೂಲಕ ಹಣ ಕಳಿಸುತ್ತಾರೆ. ಅದು ನೇರವಾಗಿ ಸೈಬರ್ ಕಳ್ಳರ ಕೈಸೇರುತ್ತದೆ. ಒಮ್ಮೆ ಬಿಟ್ ಕಾಯಿನ್ ಮೂಲಕ ಹಣ ವರ್ಗಾವಣೆ ಆದರೆ ಮತ್ತೆ ಅದನ್ನು ಪತ್ತೆ ಮಾಡಿ ಹಣ ವಾಪಸ್ ಪಡೆಯುವುದು ಬಹುತೇಕ ಅಸಾಧ್ಯ . ಮೋಸಕ್ಕೆ ಒಳಗಾದರೆ ಕಾನೂನು ಕ್ರಮ ಕೈಗೊಳ್ಳುವುದೂ ಕಷ್ಟ.