ಸಿಡಬ್ಲ್ಯುಸಿ ಸದಸ್ಯತ್ವ: ಖರ್ಗೆಗೆ ಪೂರ್ಣಾಧಿಕಾರ; ಚುನಾವಣೆ ಇಲ್ಲ, ನಾಮ ನಿರ್ದೇಶನಕ್ಕೆ ಅವಕಾಶ

Mallikarjun Kharge
Published on

ನವದೆಹಲಿ: ಪಕ್ಷದ ಅತ್ಯುನ್ನತ ಸಮಿತಿಯಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ (ಸಿಡಬ್ಲು್ಯಸಿ) ಸದಸ್ಯರನ್ನು ನಾಮನಿರ್ದೇಶನ ಮಾಡಲು ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಂಪೂರ್ಣ ಅಧಿಕಾರ ನೀಡಲು ಕಾಂಗ್ರೆಸ್ ಸರ್ವಾನುಮತದಿಂದ ತೀರ್ವನಿಸಿದೆ.

ಸಿಡಬ್ಲು್ಯಸಿ ಸದಸ್ಯತ್ವಕ್ಕೆ ಆಂತರಿಕ ಚುನಾವಣೆ ನಡೆಯಬೇಕು ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬಂದಿದ್ದವು. ಆದರೆ, ಒಟ್ಟಾರೆ ಅಭಿಪ್ರಾಯ ಸಂಗ್ರಹಿಸಿ ಈ ಅಧಿಕಾರವನ್ನು ಎಐಸಿಸಿ ಅಧ್ಯಕ್ಷರಿಗೆ ನೀಡಲು ನಿರ್ಧರಿಸಲಾಗಿದೆ. ಸಿಡಬ್ಲು್ಯಸಿಗೆ ಯಾವುದೇ ಚುನಾವಣೆ ನಡೆಯಲ್ಲ ಎಂದು ಕಾಂಗ್ರೆಸ್ ಸಂವಹನ ವಿಭಾಗದ ಮುಖ್ಯಸ್ಥ ಮತ್ತು ರಾಜ್ಯಸಭೆ ಸದಸ್ಯ ಜೈರಾಮ್ ರಮೇಶ್ ತಿಳಿಸಿದರು. ಸಿಡಬ್ಲು್ಯಸಿ ಸೇರಿ ಪಕ್ಷದ ವಿವಿಧ ಅಂಗಗಳಿಗೆ ಸದಸ್ಯರನ್ನು ಚುನಾವಣೆ ಮೂಲಕ ಆಯ್ಕೆ ಮಾಡಬೇಕು ಎಂಬ ಕೂಗು ಮೊದಲಿನಿಂದಲೂ ಕೇಳಿಬರುತ್ತಿತ್ತು. ಆದರೆ, ಮತ್ತೊಮ್ಮೆ ಪಕ್ಷದ ಅಧ್ಯಕ್ಷರಿಗೆ ಅಧಿಕಾರ ನೀಡುವ ಮೂಲಕ ಕಾಂಗ್ರೆಸ್ ಹಳೇ ಪರಂಪರೆ ಮುಂದುವರಿಸಿದೆ. ಛತ್ತೀಸ್​ಗಢದ ರಾಯಪುರದಲ್ಲಿ ಶುಕ್ರವಾರ ಆರಂಭಗೊಂಡ ಎಐಸಿಸಿ ಮಹಾಧಿವೇಶನದ ಮೊದಲ ದಿನ ನಡೆದ ಪಕ್ಷದ ಸಂಚಾಲನಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಲಾಗಿದೆ.

ಅಚ್ಚರಿ ಎಂಬಂತೆ, ಈ ಸಭೆಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಮತ್ತು ಪ್ರಿಯಾಂಕಾ ಪಾಲ್ಗೊಂಡಿರಲಿಲ್ಲ. ಇವರು ಶನಿವಾರ ಮತ್ತು ಭಾನುವಾರ ಎಐಸಿಸಿ ಸರ್ವಸದಸ್ಯರ ಮಹಾಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಚಾಲನಾ ಸಮಿತಿ ಸಭೆಯಲ್ಲಿ ಸಿಡಬ್ಲು್ಯಸಿಗೆ ಚುನಾವಣೆ ನಡೆಸುವ ಬಗ್ಗೆ ವಾದ-ಪ್ರತಿವಾದ ಜೋರಾಗಿಯೇ ಕೇಳಿಬಂದವು ಎನ್ನಲಾಗಿದೆ. ಅಂದಾಜು ಎರಡೂವರೆ ತಾಸು ಈ ಚರ್ಚೆ ನಡೆಯಿತು.

ದೇಶ ಎದುರಿಸುತ್ತಿರುವ ರಾಜಕೀಯ ಸವಾಲುಗಳನ್ನು ಗಮನದಲ್ಲಿಟ್ಟು ಕೊಂಡು, ಕಾಂಗ್ರೆಸ್ಸನ್ನು ಪ್ರಮುಖ ಪ್ರತಿಪಕ್ಷವಾಗಿ ರೂಪಿಸಲು ಮತ್ತು ಪಕ್ಷದ ಸಂವಿಧಾನದಲ್ಲಿ ತರಲಿರುವ ದೂರಗಾಮಿ ತಿದ್ದುಪಡಿಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ತಿದ್ದುಪಡಿಗಳಲ್ಲಿ ಪ್ರಮುಖವಾದದ್ದು, ಎಸ್​ಸಿ, ಎಸ್​ಟಿ, ಒಬಿಸಿ, ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಯುವಕರಿಗೆ ಸಿಡಬ್ಲು್ಯಸಿಯಲ್ಲಿ ಶೇ.50 ಮೀಸಲು ಒದಗಿಸುವುದಾಗಿದೆ ಎಂದು ಜೈರಾಮ್ ರಮೇಶ್ ಮಾಹಿತಿ ನೀಡಿದ್ದಾರೆ.

ಸರ್ವಾನುಮತ ಆಗಿರಲಿಲ್ಲ: ಸಿಡಬ್ಲು್ಯಸಿ ಸದಸ್ಯತ್ವಕ್ಕೆ ಚುನಾವಣೆ ನಡೆಯಬೇಕು ಎಂದು ಮುಖಂಡರಾದ ಅಭಿಷೇಷ್ ಮನು ಸಿಂಘಿ, ದಿಗ್ವಿಜಯ ಸಿಂಗ್, ಅಜಯ್ ಮಾಕೇನ್ ಸೇರಿ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. 2024ರ ಲೋಕಸಭೆ ಚುನಾವಣೆ ನಂತರ ವಾದರೂ ಸರಿ, ಆಂತರಿಕ ಚುನಾವಣೆ ಮೂಲಕವೇ ಸದಸ್ಯರನ್ನು ಆಯ್ಕೆ ಮಾಡಬೇಕು ಎನ್ನುವುದು ಸಿಂಘಿ ಅನಿಸಿಕೆ ಎನ್ನಲಾಗಿದೆ. ಏತನ್ಮಧ್ಯೆ, ಚುನಾವಣೆ ಬಗ್ಗೆ ಪಕ್ಷದ ನಾಯಕರ ಮಧ್ಯೆ ಭಿನ್ನಾಭಿಪ್ರಾಯವಿಲ್ಲ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದು, ಖರ್ಗೆ ಕೈ ಬಲಪಡಿಸಿ, ಆ ಮೂಲಕ ಪಕ್ಷದ ಬಲವರ್ಧನೆ ನಮ್ಮೆಲ್ಲರ ಗುರಿ ಎಂದು ಹೇಳಿದ್ದಾರೆ.

ಪ್ರಮುಖ ತೀರ್ಮಾನ: ಮೂರು ದಿನದ ಸಭೆಯಲ್ಲಿ ಲೋಕಸಭೆ ಚುನಾವಣೆಗೆ ಸಂಬಂಧಿಸಿ ಪಕ್ಷ ತನ್ನ ರಣನೀತಿಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ಕೆಲ ಪ್ರಮುಖ ತೀರ್ಮಾನ ಕೈಗೊಳ್ಳುವ ಉದ್ದೇಶ ಹೊಂದಿದೆ. ಪಕ್ಷದ 15,000 ಪ್ರಮುಖ ಸದಸ್ಯರು ಈ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಫೆ.26ರಂದು ಅಭಿವೃದ್ಧಿಗೆ ಸಂಬಂಧಿಸಿದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಕುರಿತು ನಿರ್ಣಯ ತೆಗೆದುಕೊಳ್ಳುವ ಜತೆಗೆ ಯುವಕರು, ಉದ್ಯೋಗ ಮತ್ತು ಶಿಕ್ಷಣದ ಬಗ್ಗೆ ಚರ್ಚೆ ನಡೆಯಲಿದೆ. 26ರ ಮಧ್ಯಾಹ್ನ 2 ಗಂಟೆಗೆ ಕಾಂಗ್ರೆಸ್ ಅಧ್ಯಕ್ಷರಿಂದ ಭಾಷಣ ಮತ್ತು ಸಂಜೆ 4 ಗಂಟೆಗೆ ಸಾರ್ವಜನಿಕ ಸಭೆ ಏರ್ಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net