ನೆಡುತೋಪಿನಲ್ಲಿ ಮರಗಳ ಕಡಿತಲೆ

sgr protest
ಕೆಳದಿ ಗ್ರಾಮದ ಸ.ನಂ.82ರ ಎಂಪಿಎಂ ನೆಡುತೋಪಿನಲ್ಲಿ ಮರಗಿಡಗಳನ್ನು ನಾಶಪಡಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕೆಳದಿ, ಹಳ್ಳಿಬೈಲು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ರಮೇಶ್ ಇ. ಕೆಳದಿ, ದೇವಪ್ಪ, ಕೆ.ಆರ್.ಮಹೇಶ್, ಕೆ.ಬಿ.ಮಂಜಪ್ಪ, ವೆಂಕಟೇಶ್ ಇತರರಿದ್ದರು.
Published on

ಸಾಗರ: ತಾಲೂಕಿನ ಕೆಳದಿ ಗ್ರಾಮದ ಸರ್ವೇ ನಂ.82ರ ಎಂಪಿಎಂ ನಡುತೋಪಿನಲ್ಲಿ ಅಕ್ರಮವಾಗಿ ಸಾಗುವಳಿಗಾಗಿ ಮರಗಿಡಗಳನ್ನು ನಾಶಪಡಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕೆಳದಿ, ಹಳ್ಳಿಬೈಲು ಗ್ರಾಮಸ್ಥರು ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಹಳ್ಳಿಬೈಲು ಗ್ರಾಮದಲ್ಲಿ ಕಂದಾಯ ಇಲಾಖೆ 1.20 ಎಕರೆ ಜಾಗವನ್ನು ಅಕ್ರಮವಾಗಿ ವ್ಯಕ್ತಿಯೊಬ್ಬರಿಗೆ ಮಂಜೂರು ಮಾಡಿಕೊಟ್ಟಿತ್ತು. ಕೆಳದಿ ಮತ್ತು ಹಳ್ಳಿಬೈಲು ಗ್ರಾಮಸ್ಥರ ನಿರಂತರ ಹೋರಾಟದಿಂದ ಉಪವಿಭಾಗಾಧಿಕಾರಿ ಮೂಲಕ ಖಾತೆ ರದ್ದುಪಡಿಸಲಾಗಿದೆ. ರದ್ದುಮಾಡುವ ತನಕ ಸದರಿ ಜಾಗದಲ್ಲಿ ಯಾವುದೇ ಸಾಗುವಳಿ ಇರಲಿಲ್ಲ. ಖಾತೆ ರದ್ದು ಮಾಡಿದ ನಂತರ ಈ ಜಾಗದಲ್ಲಿರುವ ಅಕೇಶಿಯಾ, ಕಾಡುಜಾತಿ ಮರಗಳನ್ನು ಬೆಂಕಿ ಹಾಕಿ ಸುಡಲಾಗುತ್ತಿದೆ ಎಂದು ತಾಲೂಕು ಪ್ರಗತಿಪರ ಯುವ ಒಕ್ಕೂಟದ ಅಧ್ಯಕ್ಷ ರಮೇಶ್ ಇ. ಕೆಳದಿ ದೂರಿದರು.
ಜೀವಂತ ಇರುವ ಮರಗಳನ್ನು ಸುಟ್ಟು ಪರಿಸರ ನಾಶ ಮಾಡುತ್ತಿರುವ ಬಗ್ಗೆ ಗ್ರಾಮಸ್ಥರು ಅರಣ್ಯ ಮತ್ತು ಕಂದಾಯ ಇಲಾಖೆಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಈ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂಪಿಎಂ ಕಾವಲುಗಾರನಿಗೆ ಜೀವ ಬೆದರಿಕೆ ಹಾಕಲಾಗಿದೆ. ಮತದಾನ ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಕೆ ನೀಡಿದಾಗ ಉಪವಿಭಾಗಾಧಿಕಾರಿ ಸ್ಥಳಕ್ಕೆ ಆಗಮಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ತಕ್ಷಣ ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೇ ನಡೆಸಿ ಅಕ್ರಮವಾಗಿ ಸಾಗುವಳಿ ಮಾಡಿರುವ ಹಾಗೂ ಅರಣ್ಯ ನಾಶ ಮಾಡಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಕೆಳದಿ ಭೂತೇಶ್ವರ ಗ್ರಾಮ ಸಮಿತಿ ಅಧ್ಯಕ್ಷ ದೇವಪ್ಪ ಮಾತನಾಡಿ, ಅರಣ್ಯ ನಾಶ ಮಾಡುತ್ತಿರುವ ಮತ್ತು ಅಕ್ರಮವಾಗಿ ಸಾಗುವಳಿ ಮಾಡುತ್ತಿರುವ ಮಾಹಿತಿ ಗೊತ್ತಿದ್ದರೂ ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಮೌನವಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸರ್ಕಾರಿ ಭೂಮಿ, ಅರಣ್ಯ ಉಳಿಸಿಕೊಳ್ಳಲು ಗ್ರಾಮಸ್ಥರು ತೋರಿಸಿದಷ್ಟೂ ಆಸಕ್ತಿಯನ್ನು ಇಲಾಖೆ ಅಧಿಕಾರಿಗಳು ತೋರಿಸುತ್ತಿಲ್ಲ. ತಕ್ಷಣ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸದಿದ್ದರೆ ಪ್ರತಿಭಟನೆ ಸ್ವರೂಪವನ್ನು ತೀವ್ರಗೊಳಿಸುತ್ತೇವೆ.
ಮನವಿ ಸ್ವೀಕರಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಅಕೇಶಿಯಾ ಮತ್ತು ಕಾಡುಜಾತಿ ಮರಗಳನ್ನು ನಾಶ ಮಾಡಿರುವುದನ್ನು ಪರಿಶೀಲಿಸಿ, ತಪ್ಪಿತಸ್ಥನ ವಿರುದ್ಧ ಎ್ಐಆರ್ ದಾಖಲಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.
ಗ್ರಾಮಸ್ಥರಾದ ಕೆ.ಆರ್.ಮಹೇಶ್, ಕೆ.ಬಿ.ಮಂಜಪ್ಪ, ವೆಂಕಟೇಶ್, ಲಕ್ಷ್ಮಣ, ಮಂಜಪ್ಪ, ರಾಮಚಂದ್ರ, ಕೃಷ್ಣಪ್ಪ, ಕೆರೆಯಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net