ಕಟಕ್ ರಸ್ತೆ ದುರಂತ: ಭೀಕರ ರಸ್ತೆ ಅಪಘಾತದಲ್ಲಿ ಒಡಿಶಾದ ಯುವ ಕ್ರೀಡಾಪಟುಗಳು ಬಲಿ | Odisha sprinters death

ಒಡಿಶಾದ ಇಬ್ಬರು ಪ್ರತಿಭಾವಂತ ಉದಯೋನ್ಮುಖ ಅಥ್ಲೀಟ್‌ಗಳು ಕಟಕ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದ್ದಾರೆ. ಈ ದುರ್ಘಟನೆಯಿಂದಾಗಿ ಕ್ರೀಡಾ ಲೋಕದಲ್ಲಿ ತೀವ್ರ ಶೋಕ ಹಾಗೂ ಆಘಾತ ಮಡುಗಟ್ಟಿದೆ.
Athletes accident
ರಸ್ತೆ ಅಪಘಾತದಲ್ಲಿ ಒಡಿಶಾದ ಇಬ್ಬರು ಕ್ರೀಡಾಪಟುಗಳ ದುರ್ಮರಣ
Published on: 

Athletes accident: ಒಡಿಶಾದ ಕಟಕ್ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಪ್ರತಿಭಾವಂತ ಕ್ರೀಡಾಪಟುಗಳು ಅಸುನೀಗಿದ್ದಾರೆ. ಉದಯೋನ್ಮುಖ ಸ್ಪ್ರಿಂಟರ್ ಮೃತ್ಯುಂಜಯ್ ಜಯರಾಮ್ ಡೊಂಡಪಾಟಿ ಹಾಗೂ 400 ಮೀಟರ್ ಓಟಗಾರ ಮಲಯ ಬಾರಿಕ್ ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ. ಇವರ ಈ ಅಕಾಲಿಕ ಅಗಲಿಕೆಯಿಂದಾಗಿ ರಾಜ್ಯದ ಕ್ರೀಡಾ ವಲಯದಲ್ಲಿ ತೀವ್ರ ಶೋಕ ಮಡುಗಟ್ಟಿದೆ.

ವರದಿಗಳ ಪ್ರಕಾರ, ಮೂವರು ಕ್ರೀಡಾಪಟುಗಳು ಮತ್ತು ಓರ್ವ ಈಜು ತರಬೇತುದಾರ ಸೇರಿದಂತೆ ನಾಲ್ವರು ಎರಡು ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಮೃತ್ಯುಂಜಯ್ ಜಯರಾಮ್ ಮತ್ತು ಮಲಯ ಬಾರಿಕ್ ಮೋಟಾರ್‌ಸೈಕಲ್‌ನಲ್ಲಿ ತೆರಳುತ್ತಿದ್ದರೆ, ಮತ್ತೊಬ್ಬ ಕ್ರೀಡಾಪಟು ಅಸ್ತೀಕ್ ಪ್ರಧಾನ್ ಮತ್ತೊಬ್ಬರೊಂದಿಗೆ ಸ್ಕೂಟರ್‌ನಲ್ಲಿ ಸುಮಾರು 50 ಮೀಟರ್ ಹಿಂದೆ ಬರುತ್ತಿದ್ದರು.

ಆಸ್ಪತ್ರೆಗೆ ತಲುಪುವಷ್ಟರಲ್ಲೇ ಮೃತ

ಇವರು ಕಟಕ್‌ಗೆ ಸಾಂಬುಪುರಿ ಮೆಲೊಡಿ ಆರ್ಕೆಸ್ಟ್ರಾ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಕ್ರೀಡಾಪಟುಗಳನ್ನು ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಆಸ್ಪತ್ರೆಗೆ ತಲುಪುವಷ್ಟರಲ್ಲೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಸಿಎಂ ಮೋಹನ್ ಚರಣ್ ಮಾಝಿ ಸಂತಾಪ

ಯುವ ಕ್ರೀಡಾಪಟುಗಳ ಸಾವಿಗೆ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಇಬ್ಬರು ಕ್ರೀಡಾಪಟುಗಳ ಅಕಾಲಿಕ ಅಗಲಿಕೆ ಒಡಿಶಾ ಕ್ರೀಡಾ ಜಗತ್ತಿಗೆ ತುಂಬಲಾರದ ನಷ್ಟ ಎಂದು ಬಣ್ಣಿಸಿದ್ದಾರೆ. ಮೃತರ ಕುಟುಂಬವರ್ಗಕ್ಕೆ ಸಾಂತ್ವನ ಹೇಳಿರುವ ಅವರು, ಅಗಲಿದ ಕ್ರೀಡಾಪಟುಗಳ ಆತ್ಮಕ್ಕೆ ಶಾಂತಿ ಕೋರಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net