ವಿದ್ಯುತ್ ದರ ಏರಿಕೆ ಖಂಡಿಸಿ ರಾಣೆಬೆನ್ನೂರ ಬಂದ್ 22ರಂದು

20-RNR-01
Published on

ರಾಣೆಬೆನ್ನೂರ: ವಿದ್ಯುತ್ ಶುಲ್ಕದಲ್ಲಿ ಅಸಹಜ ಬೆಲೆ ಏರಿಕೆಯನ್ನು ಖಂಡಿಸಿ ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಕರೆಯ ಮೇರೆಗೆ ಸ್ಥಳೀಯ ವರ್ತಕರ ಸಂಘ ಹಾಗೂ ವಿವಿಧ ಕ್ಷೇತ್ರಗಳ ವರ್ತಕರು, ಸಾರ್ವಜನಿಕರು, ಸಂಘ-ಸಂಸ್ಥೆಗಳ ಜತೆಗೂಡಿ ಜೂ. 22ರಂದು ಕರ್ನಾಟಕ ಬಂದ್ ಬೆಂಬಲಿಸಿ ನಗರದಲ್ಲಿ ವ್ಯಾಪಾರ-ವಹೀವಾಟು ಸ್ಥಗಿತಗೊಳಿಸಿ ಸ್ವಯಂ ಪ್ರೇರಿತವಾಗಿ ಬಂದ್ ಆಚರಿಸಲಾಗುವುದು ಎಂದು ಸ್ಥಳೀಯ ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಗದಿಗೆಪ್ಪ ಹೊಟ್ಟಿಗೌಡ್ರ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂದ್ ಹಿನ್ನೆಲೆಯಲ್ಲಿ ಜೂ. 22ರಂದು ಬೆಳಗ್ಗೆ 10.30ಕ್ಕೆ ನಗರದ ಎಪಿಎಂಸಿ ಗಣಪತಿ ದೇವಸ್ಥಾನದ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಹೊರಟು ಪೋಸ್ಟ್ ಸರ್ಕಲ್, ಎಂ.ಜಿ. ರಸ್ತೆ, ದುರ್ಗಾ ಸರ್ಕಲ್, ಕುರುಬಗೇರಿ ಕ್ರಾಸ್, ಹಳೆ ಪಿ.ಬಿ.ರಸ್ತೆ ಮಾರ್ಗವಾಗಿ ತಾಲೂಕು ಆಡಳಿತ ಸೌಧಕ್ಕೆ ತೆರಳಿ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ನಂತರ ಅಲ್ಲಿಂದ ಹೆಸ್ಕಾಂ ಕಚೇರಿಗೆ ತೆರಳಿ ಹೆಸ್ಕಾಂ ಅಧಿಕಾರಿಗಳಿಗೂ ಮನವಿ ಸಲ್ಲಿಸಲಾಗುವುದು ಎಂದರು.
ಹೆಸ್ಕಾಂಗಳು ಕೇಳಿದ್ದಕ್ಕಿಂತ ಹೆಚ್ಚಿನ ಶುಲ್ಕವನ್ನು ಕೆಇಆರ್‌ಸಿ ಅನುಮೋದಿಸಿದೆ. ಹೊಸ ಶುಲ್ಕ ಪದ್ಧತಿಯಲ್ಲಿ ಎಫ್‌ಎಸಿ ಲೆಕ್ಕಾಚಾರದ ವಿಧಾನವನ್ನು ಬದಲಾಯಿಸಿರುವುದರಿಂದ ಅದು ದುಪ್ಪಟ್ಟು ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇದರಿಂದ ಕೈಗಾರಿಕೆಗಳು ಮತ್ತು ವರ್ತಕರಿಗೆ ಮಾತ್ರವಲ್ಲದೆ ಜನಸಾಮಾನ್ಯರ ಮೇಲೆಯೂ ಅಧಿಕ ಭಾರ ಹೇರಿದಂತಾಗಿದೆ. ಆದ್ದರಿಂದ ಸರ್ಕಾರ ಕೂಡಲೇ ಇದನ್ನು ಹಿಂದಕ್ಕೆ ಪಡೆಯಬೇಕು ಮತ್ತು ಎಫ್‌ಎಸಿಯ ಹಳೆಯ ವ್ಯವಸ್ಥೆಯನ್ನು ಮರು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ವಿ.ಪಿ. ಲಿಂಗನಗೌಡ್ರ, ಗುರುಪ್ರಕಾಶ ಜಂಬಗಿ, ಸದಾಶಿವ ಉಪ್ಪಿನ, ಮಲ್ಲಿಕಾರ್ಜುನ ಅರಳಿ, ರಾಜು ರೇವಣಕರ, ಗಿರಡ್ಡಿ, ನಿತ್ಯಾನಂದ ಕುಂದಾಪುರ, ಮಾಲತೇಶ ಕಜ್ಜರಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net