₹213 ಕೋಟಿ ವಿದ್ಯುತ್ ಬಿಲ್ ಬಾಕಿ: ಗ್ರಾಮ ಪಂಚಾಯಿತಿಗಳಿಗೆ ಸಂಪರ್ಕ ಕಡಿತಗೊಳಿಸುವ ಎಚ್ಚರಿಕೆ ನೀಡಿದ ಬೆಸ್ಕಾಂ

download
Published on

ರಾಮನಗರ : ಒಂದಲ್ಲ ಎರಡಲ್ಲ ಬರೋಬ್ಬರಿ 213 ಕೋಟಿ ರೂಪಾಯಿ... ಇದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಗೆ (ಬೆಸ್ಕಾಂ) ಜಿಲ್ಲೆಯ ಗ್ರಾಮ ಪಂಚಾಯಿತಿಗಳು ಉಳಿಸಿಕೊಂಡಿರುವ ಬಾಕಿ ಮೊತ್ತ.

ಹೌದು, ಇದು ಅಚ್ಚರಿ ಎನಿಸಿದರೂ ಸತ್ಯ. ಕಳೆದ ಹಲವು ವರ್ಷಗಳಿಂದಲೂ ಬೀದಿ ದೀಪ ಮತ್ತು ನೀರು ಸರಬರಾಜಿಗೆ ಬಳಕೆ ಮಾಡುತ್ತಿರುವ ಗ್ರಾಪಂಗಳು ವಿದ್ಯುತ್ ಶುಲ್ಕ ಹಣ ಬಾಕಿ ಉಳಿಸಿಕೊಂಡಿದ್ದು, 2021ರ ಸೆಪ್ಟೆಂಬರ್ ಅಂತ್ಯಕ್ಕೆ ಇಷ್ಟು ಮೊತ್ತದ ಬಾಕಿ ಪಾವತಿಸಬೇಕಿದ್ದು, ಹಣ ಪಾವತಿಸಿದಿದ್ದರೆ ಸಂಪರ್ಕ ಕಡಿತಗೊಳಿಸುವ ಎಚ್ಚರಿಕೆ ನೀಡಿದೆ.

ಸಂಪರ್ಕ ಕಡಿತ ನೋಟಿಸ್: ಜಿಲ್ಲೆಯಲ್ಲಿ ಬೆಸ್ಕಾಂನ ಮೂರು ವಿಭಾಗಗಳಿಗೆ ರಾಮನಗರ, ಚನ್ನಪಟ್ಟಣ ತಾಲೂಕುಗಳನ್ನು ಒಳಗೊಂಡ ರಾಮನಗರ ವಿಭಾಗ, ಕನಕಪುರ, ಕನಕಪುರ ಗ್ರಾಮಾಂತರ, ಸಾತನೂರು, ಹಾರೋಹಳ್ಳಿಯನ್ನು ಒಳಗೊಂಡ ಕನಕಪುರ ವಿಭಾಗ, ಕುದೂರು, ಮಾಗಡಿ, ಬೆಂಗಳೂರು ಗ್ರಾಮಾಂತರದ ತಾವರೆಕೆರೆ ಸೇರಿ ಮಾಗಡಿ ವಿಭಾಗವನ್ನು ಹೊಂದಿದೆ. ಇಷ್ಟರಲ್ಲಿ ತಾವರೆಕೆರೆಯನ್ನು ಹೊರತುಪಡಿಸಿ ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ನಾಲ್ಕೂ ತಾಲೂಕುಗಳು ಮೂರು ವಿಭಾಗಗಳಿಂದ ಒಟ್ಟು 213 ಕೋಟಿ ರೂಪಾಯಿ ಬಾಕಿ ಪಾವತಿ ಆಗಬೇಕಿದೆ. ರಾಮನಗರ ವಿಭಾಗದಿಂದ 89 ಕೋಟಿ ರೂಪಾಯಿ, ಮಾಗಡಿ ವಿಭಾಗದಿಂದ 25 ಕೋಟಿ ರೂಪಾಯಿ ಹಾಗೂ ಕನಕಪುರ ವಿಭಾಗದಿಂದ 99 ಕೋಟಿ ರೂಪಾಯಿ ಬಾಕಿ ಇದೆ.

ಈ ಹಿನ್ನೆಲೆಯಲ್ಲಿ ಬೆಸ್ಕಾಂ ಗ್ರಾಪಂಗೆ ಸಂಬಂಧಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ನೋಟಿಸ್ ಜಾರಿಗೊಳಿಸಿ ಆಯಾ ಗ್ರಾಪಂಗೆ ಬರುವ ಕುಡಿಯುವ ನೀರು ಮತ್ತು ಬೀದಿ ದೀಪ ವಿದ್ಯುತ್ ಸ್ಥಾವರಗಳ ಬಾಕಿ ಮೊತ್ತ ಪಾವತಿಸದೇ ಇದ್ದಲ್ಲಿ, ವಿದ್ಯುತ್ ಸಂಪರ್ಕ ನಿಲುಗಡೆಗೊಳಿಸಲಾಗುವುದು ಎನ್ನುವ ಎಚ್ಚರಿಕೆ ನೀಡಿದೆ.

ಸರ್ಕಾರವೇ ಹಣ ನೀಡುತ್ತಿಲ್ಲ: ವಿದ್ಯುತ್ ಸ್ಥಾವರಗಳಿಗೆ ಕನಿಷ್ಠ 5 ಲಕ್ಷ ರೂಪಾಯಿ ಬಿಲ್ ಅನ್ನು ಬೆಸ್ಕಾಂ ಜನರೇಟ್ ಮಾಡುತ್ತಿದೆ. ಬಳಕೆ ಮಾಡದ ಕೆಲ ಸ್ಥಾವರಗಳಿಗೂ ಬೆಸ್ಕಾಂ ಬಿಲ್ ನೀಡುತ್ತಿತ್ತು ಎಂಬ ಆರೋಪಗಳು ಇವೆ. ಕಳೆದೊಂದು ವರ್ಷದಿಂದ ಜಿಪಂ ಸಿಇಒ ಅಧ್ಯಕ್ಷತೆಯಲ್ಲಿ ಅನೇಕ ಸಭೆಗಳನ್ನು ನಡೆಸಿ, ಒಂದಷ್ಟು ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಆದರೀಗ ಮತ್ತೆ ಬೆಸ್ಕಾಂ ಸ್ಥಾವರಗಳ ಬಾಕಿ ಬಿಲ್ ನೀಡುವಂತೆ ನೋಟಿಸ್ ನೀಡಿದೆ.15ನೇ ಹಣಕಾಸು ಯೋಜನೆಯಡಿ ಗ್ರಾಪಂಗಳಿಗೆ ವಿಶೇಷ ಅನುದಾನವೂ ಇದೆ. ಇದರಲ್ಲಿಯೇ ಬೆಸ್ಕಾಂ ಬಾಕಿ ಕಟ್ಟಬಹುದು. ಅಲ್ಲದೆ, ಸ್ಥಳೀಯವಾಗಿ ಗ್ರಾಪಂಗಳಿಗೆ ಕಂದಾಯ ವಸೂಲಿಯೂ ಆಗುವುದರಿಂದ ಇದರ ಮೂಲಕ ಬಿಲ್ ಪಾವತಿ ಮಾಡಬೇಕು. ಆದರೆ ಈ ಬಗ್ಗೆ ಗ್ರಾಪಂಗಳನ್ನು ಬೆಸ್ಕಾಂ ಅಧಿಕಾರಿಗಳು ಕೇಳಿದರೆ ಸರ್ಕಾರದಿಂದ ಹಣ ಬಿಡುಗಡೆ ಆಗಿಲ್ಲ, ನಾವೇನೂ ಮಾಡಲು ಆಗಲ್ಲ ಎಂದು ಸರ್ಕಾರದ ಕಡೆಗೆ ಕೈ ತೋರುತ್ತಾರೆ. ಆದರೆ ನಷ್ಟದ ಸುಳಿಗೆ ಸಿಲುಕುವ ಆತಂಕದಲ್ಲಿರುವ ಬೆಸ್ಕಾಂ ಈ ಬಾರಿ ಕಟ್ಟು ನಿಟ್ಟಾಗಿ ವರ್ತಿಸಲು ಮುಂದಾಗಿದೆ.

ಕಾರ್ಯರೂಪಕ್ಕೆ ಬಂದರೆ ಅಪಾಯ? :  ಬೆಸ್ಕಾಂ ತನಗೆ ಬರಬೇಕಾದ ಹಣ ವಸೂಲಿಗೆ ನಿಂತಿದೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದ ಹೊರತಾಗಿಯೂ ಗ್ರಾಪಂಗಳು ಎಚ್ಚೆತ್ತುಕೊಂಡಿಲ್ಲ. ಒಂದು ವೇಳೆ ಈ ಬಾರಿ ತಾನು ನೀಡಿರುವ ನೋಟಿಸ್ ಅನ್ನು ಕಟ್ಟು ನಿಟ್ಟಾಗಿ ಜಾರಿಗೆ ತಂದಿದ್ದೇ ಆದರೆ ಖಂಡಿತವಾಗಿ ಜಿಲ್ಲೆಯ ರಾತ್ರಿಗಳು ಕಗ್ಗತ್ತಲ ರಾತ್ರಿಗಳಾಗಲಿದ್ದು, ಗ್ರಾಮಗಳಲ್ಲಿ ನೀರು ಸರಬರಾಜು ಸಂಪೂರ್ಣ ಹಳ್ಳ ಹಿಡಿಯಲಿದೆ.

ಶಾಲೆಗಳಿಗೂ ನೋಟಿಸ್ :  ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿಯ 53 ಸರ್ಕಾರಿ ಶಾಲೆಗಳಿಗೂ ಬಿಲ್ ಪಾವತಿ ಮಾಡುವಂತೆ ಬೆಸ್ಕಾಂ ನೋಟಿಸ್ ನೀಡಿದೆ. ಸೆಪ್ಟೆಂಬರ್ ಅಂತ್ಯಕ್ಕೆ 25,156 ರೂ.ಗಳ ಬಿಲ್ ಬಾಕಿ ಕಟ್ಟಬೇಕಿದ್ದು, ವಿದ್ಯುತ್ ಕಡಿತಗೊಳಿಸುವ ಎಚ್ಚರಿಕೆಯನ್ನು ಬೆಸ್ಕಾಂ ನೀಡಿದೆ. ಒಂದು ವೇಳೆ ನೋಟಿಸ್ ಜಾರಿಗೆ ಬಂದರೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ. ಕಂಪ್ಯೂಟರ್ ಕ್ಲಾಸ್, ಬಿಸಿಯೂಟಕ್ಕೂ ವಿದ್ಯುತ್ ಕಡಿತದಿಂದ ಸಮಸ್ಯೆ ಉಂಟಾಗಲಿದೆ. ಇದಷ್ಟೇ ಅಲ್ಲದೆ, ಜಿಲ್ಲೆಯ ಬಹುತೇಕ ಶಾಲೆಗಳಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ.

ನೀರು ಸರಬರಾಜು ಮತ್ತು ಬೀದಿ ದೀಪಗಳ ಸ್ಥಾವರಗಳಿಗೆ ಬಳಕೆಯಾದ ವಿದ್ಯುತ್ ಬಿಲ್ ಬಾಕಿ ಮೊತ್ತವನ್ನು ನೀಡದ ಹಿನ್ನೆಲೆಯಲ್ಲಿ ಬಿಲ್ ಪಾವತಿ ಮಾಡುವಂತೆ ಗ್ರಾಪಂಗಳಿಗೆ ನೋಟಿಸ್ ನೀಡಲಾಗಿದೆ. ಶಿವಕುಮಾರ್ ಇಇ, ಬೆಸ್ಕಾಂ ರಾಮನಗರ ವಿಭಾಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net