ಸೇಫ್​ ಆಗಿರಲಿ ಎಂದು ಲಾಕರ್​ನಲ್ಲಿ ಇಟ್ಟರೆ, 2.15 ಲಕ್ಷ ರೂ. ಗೆದ್ದಲು ತಿಂದು ಹಾಕಿತು!

PNB
Published on

ರಾಜಸ್ಥಾನ: ಉದಯಪುರದ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ (ಪಿಎನ್‌ಬಿ) ಲಾಕರ್‌ನಲ್ಲಿ ಗೆದ್ದಲು ಕಾಣಿಸಿಕೊಂಡಿದ್ದ ಕಾರಣ 2.15 ಲಕ್ಷ ರೂಪಾಯಿ ಮೌಲ್ಯದ ಕರೆನ್ಸಿ ನೋಟುಗಳು ಹಾನಿಗೀಡಾಗಿವೆ. ಹಣದ ಮಾಲೀಕರಾದ ಸುನೀತಾ ಮೆಹ್ತಾ ಅವರು ಬ್ಯಾಂಕ್‌ಗೆ ಭೇಟಿ ನೀಡಿದಾಗ ಅವರು ಹಣವನ್ನು ಇಟ್ಟಿದ್ದ ಲಾಕರ್ ಅನ್ನು ಗಮನಿಸಿದ್ದರು. ಆಗ ಅಲ್ಲಿದ್ದ ದೃಶ್ಯ ಕಂಡು ಗಾಬರಿಗೊಳಗಾದರು. ನೋಟುಗಳು ಸಂಪೂರ್ಣ ಹಾಳಾಗಿದ್ದು ಸುನೀತಾ ಮೆಹ್ತಾ, ಬ್ಯಾಂಕ್ ಆಡಳಿತದ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಬಟ್ಟೆಯ ಚೀಲದಲ್ಲಿ 2 ಲಕ್ಷ ರೂ. ಹಾಗೂ ಚೀಲದ ಹೊರಗೆ 15 ಸಾವಿರ ರೂ. ಇಡಲಾಗಿತ್ತು. ಚೀಲದ ಹೊರಗಿದ್ದ 15 ಸಾವಿರ ರೂ. ನೋಟುಗಳನ್ನು ಗೆದ್ದಲು ತಿಂದಿರುವ ಬಗ್ಗೆ ಗಮನಿಸಿದ ಲಾಕರ್​ ಮಾಲಕಿ, ಬ್ಯಾಂಕ್ ಮ್ಯಾನೇಜರ್ ಜತೆ ಮಾತನಾಡಿ ಬದಲಾಯಿಸಿಕೊಂಡರು. ಆದರೆ ಮನೆಗೆ ಹಿಂತಿರುಗಿ ಚೀಲವನ್ನು ತೆರೆದಾಗ ಅದರಲ್ಲಿದ್ದ 2 ಲಕ್ಷ ರೂ. ಕುಡ ಗೆದ್ದಲಿಗೆ ಹಾಳಾಗಿರುವುದು ಪತ್ತೆಯಾಗಿದೆ.

ಈ ಘಟನೆ ಬೆಳಕಿಗೆ ಬಂದ ನಂತರ ಬ್ಯಾಂಕಿನ ವ್ಯವಸ್ಥಾಪಕರು ಲಾಕರ್ ಸುತ್ತಲೂ ಗೆದ್ದಲು ನಿವಾರಕವನ್ನು ಸಿಂಪಡಿಸಿ ಉಳಿದ ಲಾಕರ್ ಮಾಲೀಕರಿಗೆ ತಮ್ಮ ಲಾಕರ್ ತೆರೆಯುವಂತೆ ವಿನಂತಿಸಿದರು. ಹಿಂಭಾಗದ ಲಾಕರ್‌ನಲ್ಲಿ ಗೆದ್ದಲು ಪತ್ತೆಯಾದ ನಂತರ, ಅನೇಕ ಗ್ರಾಹಕರು ಬ್ಯಾಂಕ್‌ನ ನಿರ್ವಹಣೆಯನ್ನು ಟೀಕಿಸಿದರು. ಬ್ಯಾಂಕಿನ ನಿರ್ಲಕ್ಷ್ಯದಿಂದ ಲಾಕರ್‌ಗಳ ಒಳಗಿನ ವಸ್ತುಗಳು ಹಾಳಾಗಿವೆ ಎಂದು ಜನರು ಆರೋಪಿಸಿದ್ದಾರೆ. ಗೆದ್ದಲು 20 ರಿಂದ 25 ಲಾಕರ್ ಗಳಲ್ಲಿ ನುಸುಳಿದೆ ಎನ್ನಲಾಗಿದೆ.

ಹಿರಿಯ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಯಾದವ್ ಪ್ರಕಾರ, ಹಾನಿಯ ಬಗ್ಗೆ ಮಾಹಿತಿಯನ್ನು ಉನ್ನತ ಅಧಿಕಾರಿಗಳಿಗೆ ನೀಡಲಾಗಿದ್ದು ಪರಿಸ್ಥಿತಿಯನ್ನು ಪರಿಹರಿಸಲು ಗ್ರಾಹಕರನ್ನು ಬ್ಯಾಂಕಿಗೆ ಕರೆಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net