

ಶಿವಮೊಗ್ಗ: ತಾಲೂಕಿನ ಲಕ್ಕಿನಕೊಪ್ಪ ಸರ್ಕಲ್ ಸಮೀಪ ಎರಗನಾಳ್ ರಸ್ತೆ ಪಕ್ಕದ ಅರಣ್ಯದಲ್ಲಿ ಪ್ರತಿ ದಿನ ವನ್ಯಜೀವಿಗಳ ಬೇಟೆಯಾಡಲಾಗುತ್ತಿದೆ. ಉರುಳು ಹಾಕಿ ಜಿಂಕೆಗಳನ್ನು ಸಾಯಿಸಲಾಗುತ್ತಿದೆ. ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಶಿವಮೊಗ್ಗ ಗ್ರಾಮಾಂತರ ಬಿಜೆಪಿ ಘಟಕದ ಪ್ರಮುಖರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಕಾಡು ಪ್ರಾಣಿಗಳ ಬೇಟೆಗಾಗಿ ಹಾಕಲಾಗುವ ಉರುಳಿಗೆ ಕೆಲವೊಮ್ಮೆ ಜಾನುವಾರುಗಳೂ ಬಲಿಯಾಗುತ್ತಿವೆ. ಅಧಿಕಾರಿಗಳಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಆದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ತುಂಗಾ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಕಾನೂನು ಕ್ರಮ ಜರುಗಿಸಿಲ್ಲ. ವನ್ಯಜೀವಿಗಳ ಬೇಟೆಯಾಡುವವರಿಗೆ ಅರಣ್ಯ ಇಲಾಖೆಯ ಕೆಲ ಸಿಬ್ಬಂದಿ ಸಹಕಾರವೂ ಇರುವ ಬಗ್ಗೆ ಅನುಮಾನವಿದೆ. ಈ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ವನ್ಯಜೀವಿಗಳ ಬೇಟೆಗಾಗಿ ಉರುಳು ಹಾಕುವವರು ಯಾರು? ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳದಿರಲು ಕಾರಣವೇನು? ಎಂಬ ಬಗ್ಗೆ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಬಿಜೆಪಿಯಿಂದ ದೊಡ್ಡ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಮಾಜಿ ಶಾಸಕರಾದ ಕೆ.ಜಿ ಕುಮಾಸ್ವಾಮಿ, ಕೆ.ಬಿ.ಅಶೋಕ್ ನಾಯ್ಕ, ಶಿವಮೊಗ್ಗ ಗ್ರಾಮಾಂತರ ಮಂಡಲ ಅಧ್ಯಕ್ಷ ಸಿಂಗನಹಳ್ಳಿ ಸುರೇಶ್, ಮಾಜಿ ಅಧ್ಯಕ್ಷ ಜಿ.ಇ.ವಿರೂಪಾಕ್ಷಪ್ಪ, ಪ್ರಮುಖರಾದ ಟಿ.ಪೆರುಮಾಳ್, ರಮೇಶ್, ಗಣೇಶ್, ಅನಿಲ್ ಲಕ್ಕಿನಕೊಪ್ಪ, ಶಿವು ಪ್ರತಿಭಟನೆಯಲ್ಲಿದ್ದರು.