ಧಾರ್ಮಿಕ ಆಚರಣೆಗೆ ಸಾಂಸ್ಕೃತಿಕ ಆಯಾಮ

3
Published on

ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಶ್ರೀ ಅಭಿಮತ | ಸಂಘಟನೆಗೆ ಪ್ರಧಾನ ದೈವ ವಿಘ್ನೇಶ

ವಿಜಯವಾಣಿ ಸುದ್ದಿಜಾಲ ತುಮಕೂರು
ಮನಸ್ಸು ಮತ್ತು ಭಾವನೆಗಳು ಶುದ್ಧಿಗೊಳಿಸುವಂಥದ್ದು ಹಬ್ಬಗಳ ಆಚರಣೆಯ ಮುಖ್ಯ ಸಂದೇಶವಾಗಿದೆ. ಎಲ್ಲ ಸಮುದಾಯದವರು ಸಾಂದರ್ಭಿಕವಾಗಿ ಹಬ್ಬ ಆಚರಣೆ ಮಾಡುತ್ತಾ ಬಂದಿರುವುದು ವಿಶೇಷ ಎಂದು ಶ್ರೀ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಹೇಳಿದರು.
ತುಮಕೂರಿನ ವಿನಾಯಕ ನಗರದಲ್ಲಿ ಶ್ರೀ ಸಿದ್ಧಿವಿನಾಯಕ ಸೇವಾ ಮಂಡಳಿಯಿಂದ 48ನೇ 28 ದಿನಗಳ ಗಣೇಶೋತ್ಸವಕ್ಕೆ ಶನಿವಾರ ಸಂಜೆ ಚಾಲನೆ ನೀಡಿದ ಶ್ರೀಗಳು, ಸ್ವಾತಂತ್ರೋತ್ಸವದ ಕೊಡುಗೆ ಹಿನ್ನೆಲೆಯುಳ್ಳ ಗಣೇಶೋತ್ಸವ ಧಾರ್ಮಿಕ ಆಚರಣೆಯಾಗಿದ್ದು, ಇದಕ್ಕೆ ಸಾಂಸತಿಕ ಆಯಾಮ ನೀಡಲಾಗಿದೆ ಎಂದರು.
ಬಾಲಗಂಗಾಧರನಾಥ ತಿಲಕ್​ ಅವರು ಮಹಾರಾಷ್ಟ್ರದಲ್ಲಿ ಮನೆಗಳಲ್ಲಿ ಆಚರಿಸುತ್ತಿದ್ದ ಗಣೇಶೋತ್ಸವ ವ್ಯವಸ್ಥೆ ಬದಲಿಸಿ ಎಲ್ಲರೂ ಒಟ್ಟಾಗಿ ಸೇರಿ ಆಚರಿಸುವ ಮೂಲಕ ಜನರಲ್ಲಿ ಸ್ವಾತಂತ್ರೋತ್ಸವದ ಕಿಚ್ಚು ಹಚ್ಚಿದರು. ಶ್ರೀ ಸಿದ್ಧಿವಿನಾಯಕ ಸೇವಾ ಮಂಡಳಿ 48 ವರ್ಷಗಳಿಂದ ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿದೆ. ಇನ್ನು ಎರಡು ವರ್ಷ ಕಳೆದರೆ ಸುವರ್ಣ ಮಹೋತ್ಸವ ಆಚರಿಸುವ ಸಂದರ್ಭ ಬರುತ್ತಿದೆ. ಮತ್ತಷ್ಟು ಜನರನ್ನು ಸೇರಿಸುವ ಮೂಲಕ ಸುವರ್ಣ ಮಹೋತ್ಸವವನ್ನು ಬಹಳ ಅದ್ದೂರಿಯಿಂದ ಆಚರಿಸಬೇಕು ಎಂದರು.


ಮಹಾದ್ವಾರ ಉದ್ಘಾಟಿಸಿದ ಹಿರೇಮಠಾಧ್ಯಕ್ಷ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇಡೀ ನಾಡು ಸಂಭ್ರಮದಿಂದ ಗಣೇಶನ ಪ್ರತಿಷ್ಠಾಪನಾ ಉತ್ಸವದಲ್ಲಿ ಭಾಗಿಯಾಗಿದೆ. ಹಾಗೆಯೇ ಸಿದ್ಧಿವಿನಾಯಕ ಸೇವಾ ಮಂಡಳಿ 48 ವರ್ಷಗಳಿಂದ ಗಣಪತಿ ಹಬ್ಬವನ್ನು ವಿಘ್ನೇಶ್ವರನ ಜಾತ್ರೆಯಂತೆ ನಡೆಸಿಕೊಂಡು ಬರುತ್ತಿದೆ ಎಂದರು. ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್​, ಸಮಿತಿ ನಿರ್ದೇಶಕರಾದ ಟಿ.ಕೆ.ಪದ್ಮರಾಜ್​, ಆರ್​.ಎ.ಸುರೇಶ್​ಕುಮಾರ್​ ಮತ್ತಿತರರು ಉಪಸ್ಥಿತರಿದ್ದರು.

ಗಣೇಶ ಸಂಘಟನೆಗೆ ಪ್ರಧಾನ ದೇವ. ಇದನ್ನು ಅರಿತ ತಿಲಕರು ಸ್ವಾತಂತ್ರ$್ಯ ಹೋರಾಟದಲ್ಲಿ ಜನರನ್ನು ತೊಡಗಿಸಲು ಸಾಮೂಹಿಕ ಗಣೇಶ ಉತ್ಸವ ಆರಂಭಿಸಿದರು. ಅದನ್ನು ಇಂದಿಗೂ ಮುಂದುವರಿಸಿಕೊಂಡು ಬರಲಾಗುತ್ತಿದೆ. ಘರ್​ಘರ್​ ಮೇ ಗಣಪತಿ ಹೋಗಿ, ಇಂದು ಗಲ್ಲಿಗಲ್ಲಿಗಳಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ನಡೆಯುತ್ತಿದೆ. ಇದು ಒಳ್ಳೆಯ ಬೆಳೆವಣಿಗೆ, ಯುವಜನತೆ ಹೆಚ್ಚಿನ ರೀತಿಯಲ್ಲಿ ಇದರಲ್ಲಿ ತೊಡಗಿಸಿಕೊಳ್ಳುತ್ತಿರುವುದು ಸಂಘಟನೆಯ ದೃಷ್ಟಿಯಿಂದ ಒಳ್ಳೆಯದು.| ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹಿರೇಮಠಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net