ಮಗುವನ್ನು ಅಪಹರಿಸಿ, ಕೊಲೆ ಮಾಡಿದ; ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? ಬರೀ​ ಸ್ಪೆಲ್ಲಿಂಗ್ ಮಿಸ್ಟೇಕ್​ನಿಂದ!

kidnap
Published on

ಉತ್ತರ ಪ್ರದೇಶ: ಈ ಅಪರಾಧಿಯೊಬ್ಬನಿಗೆ ಸರಿಯಾಗಿ ಇಂಗ್ಲಿಷ್ ಮಾತನಾಡಲು ಬಂದಿದ್ದರೆ, ಕಡೇಪಕ್ಷ ಪೊಲೀಸ್​ ಎನ್ನುವುದನ್ನಾದರೂ ಸರಿಯಾಗಿ ಹೇಳಲು ಗೊತ್ತಾಗಿದ್ದಿದ್ದರೆ, ಊರಿನ ಹೆಸರನ್ನು ಸರಿಯಾಗಿ ಉಚ್ಚರಿಸಿದ್ದಿದ್ದರೆ ಬಹುಶಃ ದೊಡ್ಡ ಅಪರಾಧ ಮಾಡಿಯೂ ಬಚಾವಾಗಿರುತ್ತಿದ್ದನೇನೋ!? ಆದರೆ ಬರೀ ಸ್ಪೆಲ್ಲಿಂಗ್ ಮಿಸ್ಟೇಕ್​ನಿಂದ ಸಿಕ್ಕಿಹಾಕಿಕೊಂಡು ಬಿಟ್ಟಿದ್ದಾನೆ.

ರಾಮ್​ ಪ್ರತಾಪ್ ಸಿಂಗ್ ಎಂಬ ಹೆಸರಿನ ಈತ ತನ್ನ ಅಜ್ಜಿ ಮನೆಯ ಸಮೀಪದ ಮನೆಯೊಂದರಿಂದ 8 ವರ್ಷದ ಬಾಲಕನೊಬ್ಬನನ್ನು ಅಕ್ಟೋಬರ್ 26ರಂದು ಅಪಹರಿಸಿದ್ದ. ಅಷ್ಟಕ್ಕೆ ಸುಮ್ಮನಾಗದ ಈತ ಕದ್ದ ಮೊಬೈಲ್​ಫೋನ್​ನಿಂದ ಆ ಬಾಲಕನ ತಂದೆಗೆ ಮೆಸೇಜ್ ಮಾಡಿ 2 ಲಕ್ಷ ರೂ. ಒತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದ. 'Do lakh rupay Seeta-Pur lekar pahuchiye. Pulish ko nahi batana nahi to hatya kar denge (ಎರಡು ಲಕ್ಷ ರೂ. ತೆಗೆದುಕೊಂಡು ಸೀತಾಪುರಕ್ಕೆ ಬನ್ನಿ, ಪೊಲೀಸರಿಗೆ ತಿಳಿಸಬೇಡಿ, ತಿಳಿಸಿದ್ರೆ ನಿಮ್ಮ ಮಗನನ್ನು ಸಾಯಿಸಿಬಿಡುತ್ತೇನೆ) ಎಂದು ಮೆಸೇಜ್ ಕಳಿಸಿದ್ದ.

ಪೊಲೀಸರು ಮೊಬೈಲ್​ ಫೋನ್​ ನಂಬರ್ ಆಧಾರದ ಮೇಲೆ ಸಿಮ್​ ಯಾರ ಹೆಸರಿನಲ್ಲಿತ್ತೋ ಆ ವ್ಯಕ್ತಿಯನ್ನು ಪತ್ತೆ ಹಚ್ಚಿ ವಿಚಾರಿಸಿದಾಗ, ಆತನ ಮೊಬೈಲ್​ಫೋನ್​ ಕಳವಾಗಿರುವುದು ಪತ್ತೆ ಆಗಿತ್ತು. ಬಳಿಕ ಆತ ನೀಡಿದ ಮಾಹಿತಿ ಆಧಾರದಲ್ಲಿ ಮತ್ತು ಸಿಸಿಟಿವಿ ಕ್ಲಿಪ್ಪಿಂಗ್ ಮುಂತಾದ ಸುಳಿವಿನ ಮೇರೆಗೆ ತಮಗೆ ಅನುಮಾನ ಇರುವ ಹತ್ತು ಮಂದಿಯನ್ನು ಪೊಲೀಸರು ಶನಿವಾರ ಠಾಣೆಗೆ ಕರೆ ತರುತ್ತಾರೆ.

ಠಾಣೆಯಲ್ಲಿ ಪೊಲೀಸರು ಹತ್ತೂ ಮಂದಿಗೆ ಒಂದು ಡಿಕ್ಟೇಷನ್​ ಥರದ ಪರೀಕ್ಷೆ ಮಾಡಿದ್ದಾರೆ. 'Main police main bharti hona chahta hoon. Main Hardoi se Sitapur daud kar ja sakta hoon (ನಾನು ಪೊಲೀಸ್ ಕೆಲಸಕ್ಕೆ ಸೇರಲು ಬಯಸುತ್ತೇನೆ. ನಾನು ಹರ್ದೋಯಿಂದ ಸೀತಾಪುರದವರೆಗೆ ಓಡಬಲ್ಲೆ) ಎಂಬುದನ್ನು ಬರೆಯುವಂತೆ ಹತ್ತೂ ಮಂದಿಗೆ ಹೇಳುತ್ತಾರೆ. ಆಗ ಪೊಲೀಸ್​ಅನ್ನು 'pulish' ಹಾಗೂ ಸೀತಾಪುರವನ್ನು 'Seeta-Pur' ಎಂದು ಬರೆದಿದ್ದ ರಾಮ್​ ಪ್ರತಾಪ್​ ಸಿಂಗ್​ನನ್ನು ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆತ ಮಗುವನ್ನು ಅಪಹರಿಸಿ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿರುತ್ತಾನೆ. ಉತ್ತರಪ್ರದೇಶದ ಹರ್ದೋಯಿಯ ಈತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net