

ನವದೆಹಲಿ: ಆಪ್ ಮಾಜಿ ಶಾಸಕಿ, ಈ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಅಲ್ಕಾ ಲಂಬಾ ಅವರು ಆಮ್ ಆದ್ಮಿ ಪಕ್ಷದ ಕಾರ್ಯಕರ್ತನೋರ್ವನಿಗೆ ಮತಗಟ್ಟೆಯ ಎದುರು ಹೊಡೆಯಲು ಪ್ರಯತ್ನಿಸಿದ್ದಾರೆ.
ಮಜ್ನು ಕಾ ತಿಲ್ಲಾದ ಮತಗಟ್ಟೆಯ ಬಳಿ ಆಪ್ ಕಾರ್ಯಕರ್ತ ಅಲ್ಕಾ ಅವರ ಮಗನ ಬಗ್ಗೆ ಟೀಕೆ ಮಾಡಿದ್ದೇ ಇದಕ್ಕೆ ಕಾರಣ ಎನ್ನಲಾಗಿದ್ದು ಈ ಘಟನೆಯ ವಿಡಿಯೋ ವೈರಲ್ ಆಗಿದೆ.
ಅಲ್ಕಾ ಕಾರ್ಯಕರ್ತನಿಗೆ ಹೊಡೆಯಲು ಕೈ ಎತ್ತಿ ಬೀಸುತ್ತಾರೆ. ಆದರೆ ಆತ ತಲೆ ಬಗ್ಗಿಸಿದ್ದರಿಂದ ಹೊಡೆತ ಬೀಳಲಿಲ್ಲ. ಅಲ್ಲಿಯೇ ಇದ್ದ ಪೊಲೀಸ್ ಅಧಿಕಾರಿ ಮಧ್ಯಪ್ರವೇಶ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು.
ಅಲ್ಕಾ ಲಂಬಾ ಆಪ್ ಕಾರ್ಯಕರ್ತನ ವಿರುದ್ಧ ದೂರು ನೀಡಿದ್ದು ಎಫ್ಐಆರ್ ದಾಖಲಿಸಲು ಕೇಳಿಕೊಂಡಿದ್ದಾರೆ. ಅಲ್ಲದೆ ಪೊಲೀಸರ ಎದುರು ಕಣ್ಣೀರು ಹಾಕಿದ್ದಾರೆ.
ತನ್ನ ಮಗನ ಬಗ್ಗೆ ಅವಹೇಳನಕಾರಿಯಾಗಿ ಆತನ ಮಾತನಾಡಿದ್ದಾನೆ ಎಂದು ಅಲ್ಕಾ ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ಆತ ಏನು ಹೇಳಿದ ಎಂಬುದು ಗೊತ್ತಾಗಲಿಲ್ಲ.
ಅಲ್ಕಾ ಲಂಬಾ ಚಾಂದನಿ ಚೌಕ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ. ಈ ಮೊದಲು ಆಪ್ನಲ್ಲಿಯೇ ಇದ್ದರು. ಕಳೆದ ವರ್ಷ ಆಪ್ ತೊರೆದು ಕಾಂಗ್ರೆಸ್ ಸೇರಿದ್ದಾರೆ. (ಏಜೆನ್ಸೀಸ್)