ಸಿ.ಟಿ. ರವಿ ಪ್ರಕರಣ; ದಾಖಲೆಗಳಿಲ್ಲ ಎಂದು ಹೇಳಿರುವುದು ನನಗೆ ಗೊತ್ತಿಲ್ಲ; ಡಾ.ಪರಮೇಶ್ವರ|CT Ravi's case; I don't know who said there are no records

ggp1
Published on

ಬೆಂಗಳೂರು: ಸದನದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಅವಾಚ್ಯ ಪದ ಬಳಸಿದ ಆರೋಪಕ್ಕೆ ಸಂಬಂಧಿಸಿದ ಸಿ.ಟಿ.ರವಿ ಪ್ರಕರಣದಲ್ಲಿ ಸಭಾಪತಿಗಳು ದಾಖಲೆಗಳಿಲ್ಲ ಎಂದಿರುವುದು ನನಗೆ ಗೊತ್ತಿಲ್ಲ(CT Ravi's case; I don't know who said there are no records) ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ(Dr G Parameswar) ಹೇಳಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲವರು ಸದನ ಮುಗಿದ ಮೇಲೆ ಘಟನೆ ನಡೆದಿದೆ ಎಂದು ಹೇಳುತ್ತಾರೆ.ಅದನ್ನು ನಾನು ವಿಶ್ಲೇಷಣೆ ಮಾಡುವುದಿಲ್ಲ. ಪ್ತಕರಣ ಕೋರ್ಟ್‌ನಲ್ಲಿರುವುದರಿಂದ ಆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರು.

ಪೊಲೀಸರು ರವಿ ಅವರನ್ನು ರಾತ್ರಿ ಇಡೀ ಸುತ್ತಾಡಿಸಿದ್ದೇಕೆ ಎಂಬ ಮಾಹಿತಿಯನ್ನು ಕೇಳುತ್ತಿದ್ದೇನೆ. ಮಾಹಿತಿ ಬಂದಮೇಲೆ ಹೇಳುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಕರಣದಲ್ಲಿ ಪೊಲೀಸರು ಸರಿಯಾಗಿ ನಡೆದುಕೊಂಡಿದ್ದೇವೆ ಎಂಬ ವಾದ ಇರುತ್ತದೆ. ಪ್ರಕರಣ ಕೋರ್ಟ್‌ನಲ್ಲಿರುವುದರಿಂದ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಅವರು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

ಬೇರೆಬೇರೆ ರೀತಿಯಲ್ಲಿ ಮಾಹಿತಿಯನ್ನು ಕೇಳುವ ಸಂದರ್ಭದಲ್ಲಿ, ಇವರನ್ನು ಕೇಳದೆ ಜಡ್ಜ್‌ಮೆಂಟ್ ಆಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಅದರ ಬಗ್ಗೆ ಟೀಕೆ ಮಾಡಲು ಆಗುವುದಿಲ್ಲ. ಸಭಾಪತಿಗಳು ದಾಖಲೆಗಳಿಲ್ಲ ಎಂದು ಹೇಳಿರುವುದು ನನಗೆ ಗೊತ್ತಿಲ್ಲ. ಕೆಲವರು ಸದನ ಮುಗಿದ ಬಳಿಕ ಘಟನೆ ನಡೆಯಿತು ಎಂದು ಹೇಳುತ್ತಿದ್ದಾರೆ. ಆದ್ದರಿಂದ ಸಭಾಪತಿಗಳಿಗೆ ಇದರಲ್ಲಿ ಏನು ಹೇಳಲು ಆಗುವುದಿಲ್ಲ ಎಂದು ಮತ್ತೆ ಕೆಲವರು ವಿಶ್ಲೇಷಣೆ ಮಾಡುತ್ತಾರೆ. ಇನ್ನು ಕೆಲವರು ಸದನ ನಡೀತಾ ಇತ್ತು ಎಂದು ವಿಶ್ಲೇಷಣೆ ಮಾಡಿದ್ದಾರೆ. ಅದನ್ನೆಲ್ಲ ಈಗ ನಾನು ಮಾತನಾಡಲು ಹೋಗುವುದಿಲ್ಲ ಎಂದರು.

ಸಿ.ಟಿ.ರವಿ ಮೇಲೆ ಹಲ್ಲೆ ಯತ್ನ ಮಾಡಿದ ವಿಚಾರಕ್ಕೆ 24 ಜನರನ್ನು ಆ ಕ್ಷಣದಲ್ಲೇ ಬಂಧಿಸಲಾಗಿದೆ. ತದನಂತರ ಅವರನ್ನು ಬಿಟ್ಟಿದ್ದಾರೆ. ಬಂಧನ ಮಾಡದೇ ಹೋಗಿದ್ದರೆ ಇನ್ನೂ ಹೆಚ್ಚು ಘಟನೆಗಳು ಆಗುತ್ತಿತ್ತು. ಕೋರ್ಟ್ ನೀಡಿರುವ ತಡೆಯಾಜ್ಞೆ ಆದೇಶವನ್ನು ತೆರವುಗೊಳಿಸಲು ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

ಗೃಹ ಇಲಾಖೆ ಓವರ್ ಟೇಕ್ ಮಾಡಿ ಈ ಬೆಳವಣಿಗೆ ನಡೆಯಿತೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ರೀತಿ ಮಾಡಲು ಆಗುತ್ತಾ? ನಮ್ಮ ಮೇಲೆ ಮುಖ್ಯಮಂತ್ರಿಗಳು ಇದ್ದಾರೆ. ಮುಖ್ಯಮಂತ್ರಿ ಬಿಟ್ಟರೆ ಬೇರೆ ಯಾರು ಇಲ್ಲ. ಅಷ್ಟು ಬಿಟ್ಟರೆ ಬೇರೇನೂ ಕಾಣಿಸುತ್ತಿಲ್ಲ. ನನಗೆ ಬೇಕಾದಷ್ಟು ಸ್ವಾತಂತ್ರ್ಯ ಇದೆ ಎಂದರು.

ಕಲಾಪ ಸೂಕ್ತ ರೀತಿಯಲ್ಲಿ ನಡೆದಿದೆಯೆ ಎಂಬ ಕುರಿತು ಪ್ರತಿಕ್ರಿಯಿಸಿದ ಅವರು, ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ಅನೇಕ ಪ್ರತಿಭಟನೆಗಳು ನಡೆದವು. ಎಸ್‌ಸಿ, ಎಸ್‌ಟಿ, ವಕೀಲರು, ರೈತರು, ಪಂಚಮಸಾಲಿ ಸಮುದಾಯದ ಪ್ರತಿಭಟನೆಗಳಾದವು. ಎರಡು ಸದನಗಳಲ್ಲಿಯೂ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಸಂಪೂರ್ಣ ಚರ್ಚೆಯಾಗಿದೆ. ವಕ್ಫ್ ವಿಚಾರವಾಗಿ ಚರ್ಚೆಯಾಗಿದ್ದು, ಅದಕ್ಕೆ ಸಚಿವರು ಸಮಂಜಸವಾಗಿ ಉತ್ತರ ಕೊಟ್ಟಿದ್ದಾರೆ. ಮುಖ್ಯಮಂತ್ರಿಯವರಿಗೆ ಉತ್ತರ ನೀಡಲು ಬಿಡಲಿಲ್ಲ. ಎಲ್ಲ ಸಮಯ ವ್ಯರ್ಥ ಆಯ್ತು ಎಂದು ಹೇಳಲು ಆಗುವುದಿಲ್ಲ ಎಂದು ಡಾ.ಪರಮೇಶ್ವರ ಪ್ರತಿಕ್ರಿಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net