

ಬೆಂಗಳೂರು: ನಮ್ಮ ವಿರುದ್ಧ ಆರೋಪ ಮಾಡಿ ಅಧಿಕಾರಕ್ಕೆ ಬಂದವರು ಈಗ ಕಮಿಷನ್ಗಾಗಿ ಗುತ್ತಿಗೆದಾರರಿಗೆ ಕಿರುಕುಳ ಕೊಡುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಚಿಕ್ಕಮಗಳೂರು ಕ್ಷೇತ್ರದ ಮಾಜಿ ಶಾಸಕ ಸಿ.ಟಿ. ರವಿ ಆರೋಪಿಸಿದ್ದಾರೆ.
ಕಳೆದ ಐದು ವರ್ಸಷಗಳಲ್ಲಿ ನಡೆದಿರುವ ಕಾಮಗಾರಿಗಳ ಬಿಲ್ಗಳಿಗೂ ಕಮಿಷನ್ ಕೊಡುವಂತೆ ಕೇಳುತ್ತಿದ್ದಾರೆ. ಸರ್ಕಾರಕ್ಕೆ ಪ್ರಾಮಾಣಿಕತೆ ಎನ್ನುವುದಿದ್ದರೆ ಗುತ್ತಿಗೆದಾರರ ಬಾಕಿಯನ್ನೂ ಪಾವತಿಸಲಿ. ಈವರೆಗೆ ಎಷ್ಟು ಬಿಲ್ ಪಾವತಿಸಿದ್ದಾರೆ ಎಂಬ ಮಾಹಿತಿಯನ್ನು ಸರ್ಕಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಹಿಂದೆ ಕಾಂಗ್ರೆಸ್ನವರು ನಮ್ಮ ಮೇಲೆ ಆರೋಪ ಮಾಡಿದ್ದರು. ಈಗ ಕಮಿಷನ್ಗಾಗಿ ಇವರೇ ಗುತ್ತಿಗೆದಾರರಿಗೆ ಕಿರುಕುಳ ಕೊಡಲು ಆರಂಭಿಸಿದ್ದಾರೆ. ತಮ್ಮಗಾದ ಕುರಿತು ಗುತ್ತಿಗೆದಾರರು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ನೋವನ್ನೂ ತೋಡಿಕೊಂಡಿದ್ದಾರೆ. ಗುತ್ತಿಗೆದಾರರು ಸುದ್ದಿಗೋಷ್ಠಿ ನಡೆಸಿ ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ವಿರುದ್ಧ ಆರೋಪಿಸಿದ್ದಾರೆ.
ಇದನ್ನೂ ಓದಿ: ಟ್ರ್ಯಾಕ್ಟರ್-ಬೈಕ್ ಮುಖಾಮುಖಿ ಡಿಕ್ಕಿ; ಚಾಲಕ ಮೃತ್ಯು
ಡಿಸಿಎಂ ಡಿ.ಕೆ. ಶಿವಕುಮಾರ್ ನೋಡಿದರೆ ತಮಗೆ ಬೆದರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಡಿ.ಕೆ. ಶಿವಕುಮಾರ್ ಅವರಿಗೆ ಬ್ಲ್ಯಾಕ್ಮೇಲ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಇವರೇ ಯಾರಿಗಾದರೂ ಬ್ಲ್ಯಾಕ್ಮೇಲ್ ಮಾಡಿರಬಹುದು. ಗುತ್ತಿಗೆದಾರರ ಬಳಿ ಕಮಿಷನ್ಗೆ ಬೇಡಿಕೆ ಇಟ್ಟಿರುವ ವಿಚಾರ ನನ್ನ ಗಮನಕ್ಕೂ ಬಂದಿದೆ.
ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ ನ್ಯಾಯಾಂಗ ಸಮಿತಿಯೊಂದನ್ನೂ ರಚಿಸಲಾಗಿತ್ತು. ಕಾಮಗಾರಿ ನೀಡುವ ಮೊದಲು ಎಲ್ಲವೂ ಸರಿ ಇದೆಯೇ ಎಂದು ಪರಿಶೀಲನೆ ನಡೆಸಲಾಗುತ್ತಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಮದ ಮೇಲೆ ಯಾವ ರೀತಿಯ ಕ್ರಮಕೈಗೊಂಡಿದ್ದಾರೆ. ತಮ್ಮದೇ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಗುತ್ತಿಗೆದಾರರು ಆರೋಪಿಸುತ್ತಿದ್ದಾರೆ. ಈ ವಿಚಾರವಾಗಿ ತನಿಖೆಯಾಗಬೇಕಿದೆ ಎಂದು ಚಿಕ್ಕಮಗಳೂರು ಕ್ಷೇತ್ರದ ಮಾಜಿ ಶಾಸಕ ಸಿ.ಟಿ. ರವಿ ಆಗ್ರಹಿಸಿದ್ದಾರೆ.