ಜನತಾದಳ ಇಸ್ಪೀಟ್‌ನಲ್ಲಿ ಜೋಕರ್ ಇದ್ದಂತೆ: ವ್ಯಂಗ್ಯವಾಡಿದ ಸಿ.ಟಿ.ರವಿ

C T Ravi
Published on

ಹಾಸನ: ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಶಾದಿಭಾಗ್ಯ ಯೋಜನೆ ತಂದಿದ್ದರು. ಬಡವರ ಎಲ್ಲ ಹೆಣ್ಣುಮಕ್ಕಳ ಮದುವೆಗೆ ಹಣ ಕೊಡದೆ, ಒಂದು ಕೋಮಿಗೆ ಮಾತ್ರ ಸಹಾಯ ಮಾಡುವ ಯೋಜನೆಯಾಗಿತ್ತು. ಇದಕ್ಕೆ ಕಾರಣ ಅವರ ಜನಸಂಖ್ಯೆ ಕಡಿಮೆಯಾಗಿದೆ ಎಂದು. ಪಾಕಿಸ್ತಾನಕ್ಕಿಂತ ಜಾಸ್ತಿಯಗಿ ಭಾರತವನ್ನೂ ಪಾಕಿಸ್ತಾನ ಮಾಡಬೇಕು ಎನ್ನುವ ಸಂಚಿನ ಒಂದು ಭಾಗ ಇರಬಹುದೇನೋ ಅನ್ನಿಸುತ್ತದೆ ಎಂದು ಹೇಳುತ್ತಾ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

ಬಿಜೆಪಿ ಜಾತಿ ಬೇಧ ಮಾಡಿಲ್ಲ

ಹಾಸನದಲ್ಲಿ ಸಿಟಿ ರವಿ ಮಾತನಾಡುತ್ತಾ, ಬಿಜೆಪಿ ಸರ್ಕಾರ ಬೆಳೆ ಪರಿಹಾರವನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಜನರ ಖಾತೆಗೆ ವರ್ಗಾಯಿಸಿದೆ. ಫಸಲ್ ಭೀಮಾಯೋಜನೆ, ಕಿಸಾನ್ ಸಮ್ಮಾನ್ ಯೋಜನೆ ಇಂತಹ ನೂರಾರು ಜನಪರ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಎಲ್ಲೂ ಜಾತಿ ಭೇದ ಮಾಡಿಲ್ಲ ಎಂದು ಹೇಳಿದರು.

ಇತ್ತೀಚೆಗೆ ಎಸ್‌ಡಿಪಿಐ ಮುಖಂಡ ಟಿವಿಯಲ್ಲಿ ಒಂದು ಮಾತನಾಡುತ್ತಾ, 2018ರಲ್ಲಿ ಕಾಂಗ್ರೆಸ್ ಜತೆಗೆ ಅಲ್ಪಸಂಖ್ಯಾತರ ಓಟು ಚದುರಬಾರದೆಂದು ಮಾಡಿಕೊಂಡಿದ್ದ ಒಪ್ಪಂದದ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿದ್ದಾರೆ. ಕೆಲವೊಂದು ಅಜೆಂಡಾದ ಭಾಗವಾಗಿ ಪಿಎಫ್‌ಐ, ಎಸ್‌ಡಿಪಿಐ ಕೆಲಸ ಮಾಡುತ್ತಿದೆ. ಪಿಎಫ್‌ಐ, ಎಸ್‌ಡಿಪಿಐನೊಂದಿಗೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳುತ್ತದೆ ಅಂದರೆ ಎಷ್ಟು ಅಪಾಯಕಾರಿ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದು ಸಿಟಿ ರವಿ ಹೇಳಿದ್ದಾರೆ.

ಜನತಾದಳ ಜೋಕರ್ ಇದ್ದಂತೆ!

ಜನತಾದಳ ಇಸ್ಪೀಟ್‌ನಲ್ಲಿ ಜೋಕರ್ ಇದ್ದಂತೆ. ರಮ್ಮಿ ಆದರೆ ಸಾಕು, ಜೋಕರ್ ಯಾರ ಜೊತೆ ಬೇಕಾದರೂ ಸೇರಿಕೊಳ್ಳಬಹುದು. ಅಸೆಂಬ್ಲಿ ಆದರೆ ಸಾಕು, ಎಲ್ಲಾ ನಮ್ಮ ಕೈಗೆ ಬಂದು ಬಿಡುತ್ತದೆ. ಜೆಸಿಬಿ, ಹಿಟಾಚಿ ಎಲ್ಲಾ ತೆಗೆದುಕೊಂಡು ತುಂಬಿಸಿಕೊಳ್ಳಬಹುದು ಎನ್ನುವುದು ಅವರ ಲೆಕ್ಕಾಚಾರ. ರಾಜ್ಯದ ಹಿತ ಇಲ್ಲ, ದೇಶದ ಹಿತ ಇಲ್ಲ, ಅವರದ್ದು ಕೇವಲ ವ್ಯಕ್ತಿಗತ ಸ್ವಾರ್ಥ. ಆ ಸ್ವಾರ್ಥದ ಹಿನ್ನೆಲೆಯ ರಾಜಕಾರಣ. ನಮಗೆ ಬೇಕಿರುಬುದು ಸ್ಪಷ್ಟ ಬಹುಮತ. ಸ್ಪಷ್ಟ ಬಹುಮತ ತಂದರೆ ಬುಲ್ಡೋಜರ್ ಇಲ್ಲೂ ಓಡಾಡಿಸಬಹುದು ಎಂದು ಜೆಡಿಎಸ್ ವಿರುದ್ಧ ಸಿಟಿ ರವಿ ಗುಡುಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net