ಸಿಟಿ ರವಿ ದುರಹಂಕಾರ ಈ ಚುನಾವಣೆಗೆ ಕೊನೆ: ಸಿದ್ದರಾಮಯ್ಯ ಗುಡುಗು

IMG_20230506_142144
Published on

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಶಾಸಕ ಸಿ.ಟಿ.ರವಿ ಬಹಳ ಮೆರೆಯುತ್ತಿದ್ದಾನೆ. ಅಹಂಕಾರ ಹೆಚ್ಚಾಗಿದ್ದು ಆತ ‌ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾನೆ. ಆತನೊಬ್ಬ ಅತೀ ದೊಡ್ಡ ಭ್ರಷ್ಟನಾಗಿದ್ದು ಅವನನ್ನು ಲೂಟಿ ರವಿ ಎಂದು ಕರೆಯುವುದೇ ಹೆಚ್ಚು ಸೂಕ್ತ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ‌ ಸಿದ್ದರಾಮಯ್ಯ ಹೇಳಿದರು.

ಕಡೂರು ತಾಲೂಕಿನ ಸಖರಾಯಪಟ್ಣದಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಿ.ಟಿ.ರವಿ ರಾಜಕೀಯದಲ್ಲಿ ಬಹಳ ದೊಡ್ಡ ನಾಯಕ ಎಂದುಕೊಂಡಿದ್ದಾನೆ. ಈ ಚುನಾವಣೆಯೇ ಅವರ ರಾಜಕೀಯಕ್ಕೆ ಅಂತ್ಯವಾಗಲಿದೆ ಎಂದರು.

ಚಿಕ್ಕಮಗಳೂರು ಜಿಲ್ಲೆಗೆ ಯಾರೆಲ್ಲ ಆಕಾಂಕ್ಷಿಗಳಾಗಿದ್ದರೋ ಅವರೆಲ್ಲ ಒಟ್ಟಾಗಿದ್ದಾರೆ. ಮಾಜಿ ಎಂಎಲ್ ಸಿ ಗಾಯತ್ರಿ ಶಾಂತೆಗೌಡ ಅವರು ಕೂಡ ಆಕಾಂಕ್ಷಿಯಾಗಿದ್ದರು. ನಾನು ಎಂಎಲ್ ಸಿ ಆಗುತ್ತಿಯಾ ಬಿಡಮ್ಮ ಎಂದು ಹೇಳಿದ್ದಕ್ಕೆ ಚುನಾವಣೆಯಿಂದ ಹಿಂದೆ ಸರಿದರು. ಎಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡುವುದರಿಂದ  ಎಚ್.ಡಿ.ತಮ್ಮಯ್ಯ ನೂರಕ್ಕೆ ನೂರು ಗೆದ್ದೆ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯ ಕಾಂಗ್ರೆಸ್ ಅಧಿಕಾರಕ್ಕೆ ಬರುವುದೂ ಅಷ್ಟೆ ಸತ್ಯವಾಗಿದೆ. ಬಿಜೆಪಿಯವರು ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎನ್ನುತ್ತಾರೆ.‌ ಅವರು ಹೇಳೋದೇ ಒಂದು ಮಾಡುವುದು‌ ಒಂದು. ಮುಸ್ಲಿಮಯರಿಗೆ ಒಂದೇ ಒಂದು ಟಿಕೆಟ್ ಕೊಡದ ಅವರು ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂದು ಹೇಳುವ ನೈತಿಕತೆ ಅವರಿಗಿಲ್ಲ ಎಂದು ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net