

ಬೆಂಗಳೂರು: ಕ್ರಿಪ್ಟೋ ಕರೆನ್ಸಿ ವ್ಯವಹಾರ ನಡೆಸುತ್ತಿದ್ದ ಕಂಪನಿಯಿಂದ ಕೋಟ್ಯಂತರ ರೂ. ಮೌಲ್ಯದ ಬಿಟ್ ಕಾಯಿನ್ ದೋಚಿದ್ದ ನೌಕರರನ್ನು ಸಿಐಡಿಯ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಹರಿಯಾಣ ಮೂಲದ ಶುಭಾಂಗ್ ಜೈನ್ (26) ಬಂಧಿತ. ಕೃತ್ಯ ಎಸಗಿದ ಮೇಲೆ ಮುಂಬೈನಲ್ಲಿ ತಲೆಮರೆಸಿಕೊಂಡಿದ್ದ. ತಾಂತ್ರಿಕ ಸಹಾಯದಿಂದ ಆರೋಪಿಯನ್ನು ಬಂಧಿಸಿ 2 ಮೊಬೈಲ್, 2 ಲ್ಯಾಪ್‌ಟಾಪ್ ಜಪ್ತಿ ಮಾಡಲಾಗಿದೆ. ವಂಚನೆ ಮಾಡಿದ್ದ ಹಣವನ್ನು ಜಪ್ತಿ ಮಾಡುವ ಕಾರ್ಯ ಪ್ರಗತಿಯಲ್ಲಿ ಇರುವುದಾಗಿ ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.
ರಾಜಾಜಿನಗರದಲ್ಲಿ ಸೈರ್ ಟೆಕ್ನಾಲಜೀಸ್ ಪ್ರೈ.ಲಿಮಿಟೆಡ್ ಕಂಪನಿ ಕ್ರಿಪ್ಟೋ ಕರೆನ್ಸಿ ವ್ಯವಹಾರದಲ್ಲಿ ತೊಡಗಿತ್ತು. ಇದೇ ವೇಳೆ ಹರಿಯಾಣದ ಶುಭಾಂಗ್ ಜೈನ್, ತಮಿಳುನಾಡಿನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿದ್ದ. ಇದೇ ವೇಳೆ ಸೈರ್ ಟೆಕ್ನಾಲಜೀಸ್ ಕಂಪನಿಯಲ್ಲಿ ಗುತ್ತಿಗೆ ಆಧಾರದ ಮೇಲೆ ನೌಕರಿಯನ್ನು 2021ರಲ್ಲಿ ಗಿಟ್ಟಿಸಿಕೊಂಡ ಶುಭಾಂಗ್ ಜೈನ್, ಬೆಂಗಳೂರಿಗೆ ಬಂದು ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ.
ಕಂಪನಿಯ ಸ್‌ಟಾವೇರ್ ಅಭಿವೃದ್ಧಿಪಡಿಸುವುದು ಮತ್ತು ಕಂಪನಿ ಹಣಕಾಸು ನಿರ್ವಹಣೆಯ ಕೆಲಸವನ್ನು ನೋಡಿಕೊಳ್ಳುವಂತೆ 2021ರ ಮೇನಲ್ಲಿ ವಹಿಸಲಾಗಿತ್ತು. ಕಂಪನಿ ಖಾತೆಯಲ್ಲಿ ಇರುವ ಕೋಟ್ಯಂತರ ರೂ. ಮೌಲ್ಯ ಕ್ರಿಪ್ಟೋ ಕರೆನ್ಸಿ ನೋಡಿ ಆಸೆಗೆ ಒಳಗಾದ ಶುಭಾಂಗ್ ಜೈನ್‌ಗೆ ಆತನ ಪಾಲಕರು ಸಹ ವಂಚನೆ ಮಾಡುವಂತೆ ಉತ್ತೇಜನ ನೀಡಿದ್ದ.
ಕಂಪನಿಯ ಪಾಸ್‌ವರ್ಡ್‌ಗಳನ್ನು ಹೊಂದಿದ್ದ ಶುಭಾಂಗ್ ಜೈನ್,ಕ್ರಿಪ್ಟೋ ಕರೆನ್ಸಿಯನ್ನು ರೂಪಾಯಿಗೆ ಪರಿವರ್ತಿಸಿಕೊಂಡು ಆನಂತರ ತನ್ನ ಮತ್ತು ಐವರು ಸ್ನೇಹಿತರ ಬ್ಯಾಂಕ್ ಖಾತೆಗೆ ಕೋಟ್ಯಂತರ ರು. ವರ್ಗಾವಣೆ ಮಾಡಿಕೊಂಡಿದ್ದ. ಗಮನಿಸಿದ ಕಂಪನಿ ಸಿಇಒ ಅಖಿಲ್ ಗುಪ್ತಾ, ಸುಬ್ರಮಣ್ಯನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ಪಾಸ್‌ವರ್ಡ್ ದುರ್ಬಳಕ್ಕೆ ಮಾಡಿಕೊಂಡು ಕ್ರಿಪ್ಟೋ ಕರೆನ್ಸಿಯನ್ನು ಡಾಲರ್‌ಗೆ ಪರಿವರ್ತಿಸಿಕೊಂಡು ಆನಂತರ ವಿವಿಧ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡು ವಂಚನೆ ಮಾಡಿದ್ದಾರೆ.ಕಂಪನಿಗೆ ಅಂದಾಜು 56 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಆರೋಪಿಸಿದ್ದರು.
10 ಕೋಟಿ ರೂ. ಮೀರಿದ್ದ ವಂಚನೆ ಪ್ರಕರಣವಾದ ಹಿನ್ನೆಲೆಯಲ್ಲಿ ಸಿಐಡಿಗೆ ಪ್ರಕರಣದ ತನಿಖೆ ಜವಾಬ್ದಾರಿ ವಹಿಸಿದ್ದರು. ವಂಚನೆ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ವಿಷಯ ತಿಳಿದ ಶುಭಾಂಗ್ ಜೈನ್, ಬೆಂಗಳೂರು ತೊರೆದು ಅಹಮದಬಾದ್‌ನಲ್ಲಿ ನೆಲೆಸಿದ್ದ.
ಅಲ್ಲಿಂದ ಮತ್ತೆ ಮುಂಬೈಗೆ ವಾಸ ಸ್ಥಳ ಸ್ಥಳಾಂತರ ಮಾಡುವ ಸಲುವಾಗಿ ಪ್ಲ್ಯಾನ್ ಮಾಡಿದ್ದ. ಈ ಸಲುವಾಗಿ ಮುಂಬೈಗೆ ಬಂದಾಗ ಸಿಐಡಿ ಡಿಟೆಕ್ಟೀವ್ ಇನ್‌ಸ್ಪೆಕ್ಟರ್ ಶಿವಪ್ರಸಾದ್, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.