

ಬೆಂಗಳೂರು: ಮೈಕ್ರೋ ೈನಾನ್ಸ್ ಕಂಪನಿಗಳು ಮಾತ್ರವಲ್ಲ, ಯುವಜನರಿಗೆ ವ್ಯಸನ ಅಂಟಿಸಿ ಅಡ್ಡದಾರಿ ಹಿಡಿಸುತ್ತಿರುವ ಆನ್‌ಲೈನ್ ಗೇಮಿಂಗ್ ಕಂಪನಿಗಳ ವಿರುದ್ಧವೂ ರಾಜ್ಯ ಸರ್ಕಾರ ಕ್ರಮವಹಿಸಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಮೈಕ್ರೋ ೈನಾನ್ಸ್ ಕಂಪನಿಗಳಿಂದಾಗುವ ಅನಾಹುತಕ್ಕಿಂತ 10 ಪಟ್ಟು ಹೆಚ್ಚು ಅನಾಹುತಗಳು ಆನ್‌ಲೈನ್ ಗೇಮ್ಸ್‌ನಿಂದಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಕೆಲವು ಸಚಿವರು ಹಾಗೂ ಶಾಸಕರು ಆನ್‌ಲೈನ್ ಗೇಮಿಂಗ್ ಕಂಪನಿಗಳನ್ನು ಮಾಡಿಕೊಂಡು ಜನರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದರು.
ಆನ್‌ಲೈನ್ ಗೇಮ್ಸ್‌ನಿಂದ ಯುವಕರು ಬೀದಿ ಪಾಲಾಗುತ್ತಿದ್ದಾರೆ. ದರೋಡೆ, ಕಳವು ಮತ್ತಿತರ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಈ ಪ್ರಕರಣಗಳ ಬೇರು ಹುಡುಕಿದರೆ ಆನ್‌ಲೈನ್ ಗೇಮ್‌ನ ಕರಾಳ ಮುಖ ಬಯಲಾಗುತ್ತದೆ ಎಂದರು.
ಯದುವೀರ ಒಡೆಯರ್ ಬಿಜೆಪಿ ಸಂಸದರಾಗಿದ್ದಾರೆ. ಹೀಗಾಗಿ ಅವರ ಆಸ್ತಿಗೆ ಕಾಂಗ್ರೆಸ್ ಸರ್ಕಾರ ಕಣ್ಣು ಹಾಕಿದೆ. ಸುಗ್ರೀವಾಜ್ಞೆ ಹೊರಡಿಸಿರುವುದು ಹಗೆತನ ರಾಜಕಾರಣದ ಪರಮಾವಧಿ ಎಂದು ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.
ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ ಮೈಕ್ರೋ ೈನಾನ್ಸ್ ಕಂಪನಿಗಳ ಹಾವಳಿ, ಸಾಲ ವಸೂಲಿಗೆ ಜನರು ತಲ್ಲಣ, ಊರು ಖಾಲಿ, ಹಲವರ ಆತ್ಮಹತ್ಯೆ ಬಳಿಕ ಸರ್ಕಾರ ಎಚ್ಚೆತ್ತುಕೊಂಡು ಹೊಸ ಕಾನೂನು ತರಲು ಮುಂದಾಗಿದೆ ಎಂದು ದೂರಿದರು.
ಆರ್‌ಬಿಐ ನಿಯಮಾವಳಿ ಪ್ರಕಾರ ಕಾರ್ಯನಿರ್ವಹಿಸಿ ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದು, ಶೇ.90ರಷ್ಟು ಅನಧಿಕೃತ ಸಂಸ್ಥೆಗಳಿವೆ ಎಂಬುದು ಅಧಿಕಾರಿಗಳಿಗೆ ಗೊತ್ತಿದ್ದಿಲ್ಲವೆ ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಈ ಸಂಸ್ಥೆಗಳ ಜತೆಗೆ ಪೊಲೀಸರು ಕೈಜೋಡಿಸಿದ್ದಾರೆ. ಲಕ್ಷಾಂತರ ದೂರುಗಳು ದಾಖಲಾಗಿದ್ದರೂ ಕ್ರಮಕೈಗೊಂಡಿಲ್ಲ. ದಾಖಲಾದ ದೂರುಗಳು ಹಾಗೂ ಕೈಗೊಂಡ ಕ್ರಮದ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಒತ್ತಾಯಿಸಿದ ಎನ್.ರವಿಕುಮಾರ್, ದಾಖಲಾದ ದೂರುಗಳ ಬಗ್ಗೆ ಕ್ರಮಕೈಗೊಳ್ಳದಿದ್ದರೆ ಬಿಜೆಪಿ ಹೋರಾಟಕ್ಕೆ ಇಳಿಯಲಿದೆ ಎಂದು ಎಚ್ಚರಿಸಿದರು.